ಮಂಗಳೂರು: ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಹಳೆ ಸೇತುವೆಯ ಬಳಿಯ ಕೆಐಒಸಿಎಲ್ ಜಂಕ್ಷನ್‌ನಿಂದ ಅಯ್ಯಪ್ಪ ಗುಡಿಯವರೆಗೆ ಮಂಗಳವಾರ ರಾತ್ರಿ 8 ಗಂಟೆಯಿಂದ ಜು.25ರ ಬೆಳಿಗ್ಗೆ 8 ಗಂಟೆವರೆಗೆ ದುರಸ್ತಿ ಕಾಮಗಾರಿ ನಡೆಯಲಿದೆ.
ಹೀಗಾಗಿ, ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೋಡಿಕಲ್ ಕ್ರಾಸ್‌ನಿಂದ ಕೆಐಒಸಿಎಲ್ ಜಂಕ್ಷನ್‌ವರೆಗೆ, ಪಣಂಬೂರು ಜಂಕ್ಷನ್‌ನಿಂದ ಕೆಐಒಸಿಎಲ್ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಬದಲಿ ಮಾರ್ಗ ಬಳಸಬಹುದು ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಕೆಐಒಸಿಎಲ್ ಜಂಕ್ಷನ್ ಮಾರ್ಗವಾಗಿ ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುವ ವಾಹನ ಸವಾರರು ಎಚ್ಚರಿಕೆಯಿಂದ ಸಾಗಬೇಕು ಮತ್ತು ಹೆಚ್ಚು ವಾಹನ ದಟ್ಟಣೆ ಇರುವ ಸಮಯದಲ್ಲಿ ಬದಲಿ ಮಾರ್ಗ ಬಳಸಬಹುದು.
ಇತರ ಮಾರ್ಗಗಳು: ಉಡುಪಿ ಕಡೆಯಿಂದ ಬೆಂಗಳೂರು, ಮೈಸೂರು ಕಡೆಗೆ ಚಲಿಸುವ ಎಲ್ಲ ವಿಧದ ಲಘು ವಾಹನ ಹಾಗೂ ಲಾರಿಗಳು ಪಡುಬಿದ್ರಿ ಕಡೆಯಿಂದ ಕಾರ್ಕಳ ಮೂಡುಬಿದಿರೆ ಮಾರ್ಗವಾಗಿ ಸಂಚರಿಸಬಹುದು.
ಉಡುಪಿ, ಮೂಲ್ಕಿ ಕಡೆಯಿಂದ ಮಂಗಳೂರು ನಗರ ಕಡೆಗೆ ಸಂಚರಿಸುವ ಎಲ್ಲ ಲಘು ವಾಹನಗಳು ಮೂಲ್ಕಿ ವಿಜಯ ಸನ್ನಿಧಿ ಬಳಿ ಎಡಕ್ಕೆ ತಿರುವು ತೆಗೆದುಕೊಂಡು ಕಿನ್ನಿಗೋಳಿ - ಕಟೀಲು - ಬಜಪೆ - ಮರವೂರು - ಕಾವೂರು ಮೂಲಕ ಮಂಗಳೂರು ಕಡೆಗೆ ಸಂಚರಿಸಬಹುದು.
ಮಂಗಳೂರು ನಗರ, ಕೊಟ್ಟಾರ ಚೌಕಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲ ಲಘು ವಾಹನಗಳು ಕಾವೂರು - ಮರವೂರು - ಬಜಪೆ - ಕಟೀಲು - ಕಿನ್ನಿಗೋಳಿ - ಮೂಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸಬಹುದು.
ಬಿ.ಸಿ.ರೋಡ್, ಬೆಂಗಳೂರು ಹಾಗೂ ಮೈಸೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಲಾರಿ ಹಾಗೂ ಲಘು ವಾಹನಗಳು ಬಿಕರ್ನಕಟ್ಟೆ- ಕುಲಶೇಖರ - ವಾಮಂಜೂರು - ಕೈಕಂಬ - ಬಜಪೆ - ಕಟೀಲು - ಕಿನ್ನಿಗೋಳಿ - ಮೂಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸಬಹುದು.
ಎಂಸಿಎಫ್, ಎಂಆರ್‌ಪಿಎಲ್, ಎಚ್‌ಪಿಸಿಎಲ್, ಬಿಪಿಸಿಎಲ್ ಮತ್ತಿತರ ಕಂಪನಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ಎಲ್ಲ ರೀತಿಯ ಗ್ಯಾಸ್ ಟ್ಯಾಂಕರ್, ಡೀಸೆಲ್, ಪೆಟ್ರೋಲ್ ಟ್ಯಾಂಕರ್ ಹಾಗೂ ಇತರ ಘನ ವಾಹನಗಳು ಕೂಳೂರು ಹೊಸ ಸೇತುವೆಯಲ್ಲಿ ಸಂಚಾರ ದಟ್ಟಣೆಯ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.