ADVERTISEMENT

ಮಂಗಳೂರು: ಬೆಳೆ ಬೆಳೆದ ಕುಮ್ಕಿ ಜಮೀನು ಭೋಗ್ಯಕ್ಕೆ?

ಸರ್ಕಾರಿ ಜಮೀನಿನಲ್ಲಿ ಬೆಳೆದ ತೋಟಗಾರಿಕೆ ಬೆಳೆ ಗುತ್ತಿಗೆ: ಜಿಲ್ಲೆಯಲ್ಲಿ ಸಲ್ಲಿಕೆಯಾಗಿಲ್ಲ ಅರ್ಜಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 5:54 IST
Last Updated 29 ಜುಲೈ 2024, 5:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ತೋಟಗಾರಿಕಾ ಬೆಳೆಗಳನ್ನು ಬೆಳೆದ ಭೂಮಿಯನ್ನು ಆಯಾ ರೈತರಿಗೆ 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡುವ ಕುರಿತು ರಾಜ್ಯ ಕಂದಾಯ ಇಲಾಖೆಯು 2024ರ ಮಾ. 12ರಂದು ಹೊರಡಿಸಿದ ಸುತ್ತೋಲೆ ದಕ್ಷಿಣ ಕನ್ನಡ ಜಿಲ್ಲೆಯ ರೈತರಲ್ಲಿ ಕೆಲವೊಂದು ಗೊಂದಲ ಮೂಡಿಸಿದೆ. 

ಜಿಲ್ಲೆಯಲ್ಲಿ ಅನೇಕ ರೈತರು ಹತ್ತಾರು ವರ್ಷಗಳ ಹಿಂದೆಯೇ ಕುಮ್ಕಿ ಜಾಗದಲ್ಲೂ ಕೃಷಿಯನ್ನು ವಿಸ್ತರಿಸಿದ್ದಾರೆ. ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಕೆಲ ರೈತರು ಕೃತಾವಳಿ ಮಾಡಿದ ಕುಮ್ಕಿ ಜಮೀನಿನ ಹಕ್ಕನ್ನು ಪೂರ್ತಿಯಾಗಿ ತಮ್ಮ ಹೆಸರಿಗೇ ವರ್ಗಾಯಿಸಿ ಎಂದು ಅಕ್ರಮ–ಸಕ್ರಮ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದರು. ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಇನ್ನೂ ವಿಲೇ ಆಗಿಲ್ಲ. ಸರ್ಕಾರ ಮಾರ್ಚ್‌ 12ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ಕುಮ್ಕಿ ಜಾಗದಲ್ಲಿ ಬೆಳೆ ಬೆಳೆದ ಜಮೀನನ್ನು ಭೋಗ್ಯಕ್ಕೆ  ಪಡೆದರೆ ಶಾಶ್ವತವಾಗಿ ಅದರ ಹಕ್ಕನ್ನು ಪಡೆಯುವ ಅವಕಾಶ ಕೈತಪ್ಪಬಹುದು ಎಂಬುದು ಕೆಲ ರೈತರ ಆತಂಕ.

ADVERTISEMENT

ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಇದನ್ನು ಅಲ್ಲಗಳೆದಿದೆ. ‘ಕುಮ್ಕಿ ಹಕ್ಕು ಚಾಲ್ತಿಯಲ್ಲಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ. ಕಂದಾಯ ಇಲಾಖೆ ಮಾ.12ರಂದು ಹೊರಡಿಸಿರುವ ತೋಟಗಾರಿಕಾ ಬೆಳೆ ಬೆಳೆ ಜಮೀನನ್ನು ಭೋಗ್ಯಕ್ಕೆ ಸುತ್ತೋಲೆಗೂ ಕುಮ್ಕಿ ಹಕ್ಕಿಗೂ ಯಾವುದೇ ಸಂಬಂಧವಿಲ್ಲ. ಮಲೆನಾಡು ಜಿಲ್ಲೆಗಳಲ್ಲಿ ರೈತರು ಹತ್ತಾರು ಎಕರೆ ಸರ್ಕಾರಿ ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಏಲಕ್ಕಿ, ಕಾಫಿ, ಮೆಣಸು, ರಬ್ಬರ್‌, ಟೀ ಬೆಳೆಗಳನ್ನು ಬೆಳೆದವರು ವರ್ಷಕ್ಕೆ ನಿಗದಿತ ಪ್ರಮಾಣದ ಬಾಡಿಗೆಯನ್ನು ಪಾವತಿಸಿ  ಆ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಬಳಸಿಕೊಳ್ಳುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತೋಟಗಾರಿಕಾ ಬೆಳೆ ಬೆಳೆದವರು ಅದನ್ನು ಭೋಗ್ಯಕ್ಕೆ ಪಡೆಯಲೂ ಅನೇಕ ಷರತ್ತುಗಳು ಅನ್ವಯವಾಗುತ್ತವೆ. ಆ ಬೆಳೆಗಳನ್ನು ಅವರು 2005ಕ್ಕೆ ಮುನ್ನ ಬೆಳೆದಿರಬೇಕು. ಒಂದು ಕುಟುಂಬ ಗರಿಷ್ಠ 25 ಎಕರೆ ಜಮೀನನನ್ನು ಮಾತ್ರ ಭೋಗ್ಯಕ್ಕೆ ಪಡೆಯಬಹುದು. ಅದಕ್ಕಿಂತ ಹೆಚ್ಚು ಸರ್ಕಾರಿ ಜಾಗದಲ್ಲಿ ಬೆಳೆ ಬೆಳೆದಿದ್ದರೆ ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗುತ್ತದೆ. 30 ವರ್ಷಗಳ ಭೋಗ್ಯದ ಹಣವನ್ನು ಏಕಕಂತಿನಲ್ಲಿ ಪಾವತಿಸಬೇಕು.  ಆ ಜಾಗವನ್ನು ಉಪಗುತ್ತಿಗೆ ನೀಡುವಂತಿಲ್ಲ. ಆ ಜಾಗದಲ್ಲಿ ತೋಟಗಾರಿಕಾ ಬೆಳೆ ಹೊರತಾಗಿ ಬೇರೆ ಬೆಳೆ ಬೆಳೆಯುವಂತಿಲ್ಲ. 1980ರ ಅರಣ್ಯ ಸಂರಕ್ಷಣೆ ಕಾಯ್ದೆ ವ್ಯಾಪ್ತಿಯ ಜಮೀನಿನಲ್ಲಿ ಬೆಳೆ ಬೆಳೆದಿದ್ದರೆ ಅದನ್ನು ಭೋಗ್ಯಕ್ಕೆ ನೀಡಲು ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಭೋಗ್ಯಕ್ಕೆ ಪಡೆದ ಜಮೀನನ್ನು ಪರಾಭಾರೆ ಮಾಡುವಂತಿಲ್ಲ. ಆದರೆ, ಗುತ್ತಿಗೆ ಪಡೆದ ಜಮೀನನ್ನು  ಸರ್ಕಾರ ಅಥವಾ ಶೆಡ್ಯೂಲ್‌ ಬ್ಯಾಂಕ್‌ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಬೆಳೆ ಸಾಲಕ್ಕಾಗಿ ಅಡಮಾನ ಇಟ್ಟರೆ ಅದನ್ನು ಪರಾಭಾರೆ ಎಂದು ಪರಿಗಣಿಸುವುದಿಲ್ಲ’ ಎಂದು ಅವರು ತಿಳಿಸಿದರು.

ಜಮೀನು ಭೋಗ್ಯಕ್ಕೆ ನೀಡುವಂತೆ ಕೋರಿ ಜಿಲ್ಲೆಯಿಂದ ಯಾವೊಬ್ಬ ಕೃಷಿಕರೂ ಅರ್ಜಿ ಸಲ್ಲಿಸಿಲ್ಲ ಎಂದೂ ಅವರು ತಿಳಿಸಿದರು.

ಕುಮ್ಕಿಯಲ್ಲಿ ಬೆಳೆ ಬೆಳೆದ ಜಮೀನನ್ನು ಭೋಗ್ಯಕ್ಕೆ ಪಡೆದರೆ, ಭವಿಷ್ಯದಲ್ಲಿ ಅದರ ಕುಮ್ಕಿ ಹಕ್ಕಿಗೂ ಧಕ್ಕೆ ಉಂಟಾಗಲಿದೆ ಎಂಬುದು ಕೆಲ ಕೃಷಿಕರ ಕಳವಳ.  ಕುಮ್ಕಿ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಬೆಳೆದಿದ್ದರೆ, ಅದನ್ನು ಭೋಗ್ಯಕ್ಕೆ ನೀಡುವುದರಲ್ಲಿ ತಪ್ಪಿಲ್ಲ. ಇದರಿಂದ ರೈತರಿಗೆ ಅನುಕೂಲವೇ ಆಗಲಿದೆ ಎಂದು ವಾದಿಸುವ ಕೃಷಿಕರೂ ಇದ್ದಾರೆ. ಕುಮ್ಕಿ ಅಡಿ ಆ ಜಮೀನಿನ ಪೂರ್ತಿ ಹಕ್ಕು ರೈತನಿಗೆ ಸಿಗುವುದಿಲ್ಲ. ಅನಧಿಕೃತವಾಗಿ ಬೆಳೆದ ಬೆಳೆಯನ್ನು ಜಿಲ್ಲಾಡಳಿತ ಯಾವಾಗ ತೆರವುಗೊಳಿಸುತ್ತದೋ ಎಂಬ ಆತಂಕವೂ ಕೃಷಿಕರಲ್ಲಿದೆ. ಈ ಜಾಗವನ್ನು ಪರಾಭಾರೆ ಮಾಡಲು ಅವಕಾಶ ಸಿಗದಿದ್ದರೂ, ಬೆಳೆ ಸಾಲ ಪಡೆಯಲು ಅವಕಾಶ ನೀಡಬೇಕು ಎಂಬುದು ಅವರ ಒತ್ತಾಯ. 

ಏನಿದು ಕುಮ್ಕಿ ಜಮೀನು?

ಜಿಲ್ಲೆಯಲ್ಲಿ 1867ಕ್ಕೂ ಹಿಂದೆ  ಖಾಸಗಿ ಒಡೆತನದಲ್ಲಿದ್ದ ಕೃಷಿ ಹಿಡುವಳಿಯನ್ನು  ಕದೀಂ ವರ್ಗ ಜಮೀನು ಎಂದು ಕರೆಯಲಾಗುತ್ತದೆ. ಕದೀಂ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ ಆ ಜಾಗಕ್ಕೆ ಹೊಂದಿಕೊಂಡಂತೆ ಲಭ್ಯವಿರುವ 450 ಲಿಂಕ್ಸ್‌ (90 ಮೀ) ವ್ಯಾಪ್ತಿ ಸರ್ಕಾರಿ ಜಮೀನನ್ನು ಕುಮ್ಕಿ ಸವಲತ್ತಿನ ಜಮೀನು ಎಂದು ಪರಿಗಣಿಸಲಾಗುತ್ತದೆ. ಕದೀಂ ವರ್ಗದಾರರು ಕೃಷಿ ಪೂರಕ ಚಟುವಟಿಕೆಗೆ ಜಾನುವಾರು ಮೇವಿಗೆ ಸೊಪ್ಪು ಕಟ್ಟಿಗೆಗೆ ಈ ಜಮೀನನ್ನು ಬಳಸಬಹುದು.

ಕುಮ್ಕಿ ಜಮೀನು ಮಂಜೂರಾತಿ ಸ್ಥಗಿತ

ರಾಜ್ಯ ಸರ್ಕಾರ 1971ರ ಡಿ 10ರಂದು ಹೊರಡಿಸಿದ್ದ ಆದೇಶದ ಪ್ರಕಾರ ಕುಮ್ಕಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವುದಕ್ಕೆ ಜಿಲ್ಲಾಧಿಕಾರಿಯವರಿಗೆ ಅಧಿಕಾರ ನೀಡಲಾಗಿದೆ. 1973 ರವರೆಗೆ ಕದೀಂ ವರ್ಗದಾರರಿಗೆ ಕುಮ್ಕಿ ಜಮೀನನ್ನು ದರ್ಖಾಸು ನೆಲೆಯಲ್ಲಿ ಮಂಜೂರು ಮಾಡಲಾಗುತ್ತಿತ್ತು. 1973ರ ಮೇ 17ರಂದು ಸರ್ಕಾರ ಸುತ್ತೋಲೆ ಹೊರಡಿಸಿ ಇದನ್ನು ಸ್ಥಗಿತಗೊಳಿಸಿತು. ಆ ಬಳಿಕ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 94 ಬಿಗೆ ತಿದ್ದುಪಡಿ ತಂದು ಅಕ್ರಮ ಸಕ್ರಮ ಯೋಜನೆಯಡಿ ಕುಮ್ಕಿ ಜಮೀನು ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರ 2010ರ ಫೆ. 11ರಂದು ಸುತ್ತೋಲೆ ಹೊರಡಿಸಿ ಕುಮ್ಕಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಹೊರತಾಗಿ ಅನ್ಯ ಉದ್ದೇಶಗಳಿಗೆ ಮಂಜೂರು ಮಾಡಬಾರದು ಎಂದು ಆದೇಶಿಸಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಮ್ಕಿ ಜಮೀನನ್ನು ಆಯಾ ರೈತರಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸುವ ಸಲುವಾಗಿ  2013ರ ಫೆ.8ರಂದು ಕರಡು ಅಧಿಸೂಚನೆ ಹೊರಡಿಸಿತ್ತು. ಆದರೆ ಅದರ ಅಂತಿಮ ಅಧಿಸೂಚನೆ ಪ್ರಕಟವಾಗಲೇ ಇಲ್ಲ. 

ಜಿಲ್ಲೆಯಲ್ಲಿ ಅನೇಕ ರಬ್ಬರ್‌ ಬೆಳೆಗಾರರು ಸರ್ಕಾರಿ ಜಮೀನಿನಲ್ಲಿ ರಬ್ಬರ್‌ ಬೆಳೆಸಿದ್ದಾರೆ. ಅಂತಹ ಜಾಗವನ್ನು ಭೋಗ್ಯಕ್ಕೆ ನೀಡಿದರೆ ರೈತರು ಆತಂಕಪಡುವುದು ತಪ್ಪಲಿದೆ
–ಶ್ರೀಧರ ಜಿ.ಭಿಡೆ ಅಧ್ಯಕ್ಷರು ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಸಹಕಾರಿ ಸಂಘ
ಕೃಷಿ ಮಾಡಲು ಕುಮ್ಕಿ ಜಮೀನು ಮುಖ್ಯ. ಕುಮ್ಕಿ ಹಕ್ಕಿಗೂ ಕತ್ತರಿ ಹಾಕಬಾರದು.  ಕುಮ್ಕಿ ಜಾಗದಲ್ಲಿ ಬೆಳೆ ಬೆಳೆದ ರೈತರು ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಸಿದ ಅರ್ಜಿಯನ್ನು ಮೊದಲು ವಿಲೇ ಮಾಡಲಿ
–ಮನೋಹರ ಶೆಟ್ಟಿ, ನಡಿಕಂಬಳ ಗುತ್ತು ಕುಪ್ಪೆಪದವು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ (ಕೋಡಿಹಳ್ಳಿ ಬಣ)
ಕೃಷಿ ಮಾಡಿರುವ ಸರ್ಕಾರಿ ಜಮೀನನ್ನು ಭೋಗ್ಯಕ್ಕೆ ನೀಡುವುದು ಸ್ವಾಗತಾರ್ಹ. ಭೋಗ್ಯಕ್ಕೆ ನೀಡಲಾದ ಜಮೀನನ್ನು ಬೆಳೆ ಸಾಲ ಬಳಸಲು ಅಡಮಾನ ಇಡುವುದಕ್ಕೆ ಅವಕಾಶ ನೀಡಬೇಕು
–ರವಿಕಿರಣ್‌ ಪುಣಚ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.