ADVERTISEMENT

‘ತವರಿಗೆ ಮರಳುವ ಭರವಸೆಯೇ ಇರಲಿಲ್ಲ’

ಕುವೈತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿ, ಹಿಂದಿರುಗಿರುವ ಅಭಿಷೇಕ್‌ ಬಡಾಜೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:45 IST
Last Updated 15 ಜುಲೈ 2019, 19:45 IST
ಅಭಿಷೇಕ್‌ ಬಡಾಜೆ
ಅಭಿಷೇಕ್‌ ಬಡಾಜೆ   

ಮಂಗಳೂರು: ‘ಒಳ್ಳೆಯ ಕೆಲಸ ಪಡೆದು, ಕೈತುಂಬಾ ಹಣ ಸಂಪಾದಿಸುವ ಕನಸು ಹೊತ್ತು ಕುವೈತ್‌ಗೆ ಹೋದವರು ಆರು ತಿಂಗಳ ಕಾಲ ಇನ್ನಿಲ್ಲದ ಕಷ್ಟ ಅನುಭವಿಸಿದೆವು. ಕೆಲಸವೂ ದೊರೆಯದೇ ಅನ್ನ, ನೀರಿಗೂ ಪರದಾಡಿದೆವು. ತವರಿಗೆ ಮರಳುವ ಭರವಸೆಯೇ ನಮ್ಮಲ್ಲಿ ಉಳಿದಿರಲಿಲ್ಲ...’ –ಇವು ಉದ್ಯೋಗಕ್ಕೆಂದು ಕುವೈತ್‌ಗೆ ಹೋಗಿ ವಂಚನೆಗೊಳಗಾಗಿ ಸಂಕಷ್ಟದಲ್ಲಿದ್ದು, ಸೋಮವಾರವಷ್ಟೇ ತವರಿಗೆ ಮರಳಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಬಡಾಜೆಯ ಅಭಿಷೇಕ್‌ ಅವರ ನೋವಿನ ನುಡಿಗಳು.

ಮಂಗಳೂರಿನ ಮಾಣಿಕ್ಯ ಮ್ಯಾನ್‌ಪವರ್‌ ಕನ್ಸಲ್ಟೆನ್ಸಿ ಮೂಲಕ ತೆರಳಿದ್ದ 34 ಮಂದಿ ಸೇರಿದಂತೆ ವಿವಿಧ ಏಜೆನ್ಸಿಗಳ ಮೂಲಕ ಉದ್ಯೋಗ ಅರಸಿ ಕುವೈತ್‌ಗೆ ಹೋಗಿದ್ದ ದೇಶದ 58 ಮಂದಿ ಸಂಕಷ್ಟದಲ್ಲಿದ್ದರು. ಆರು ತಿಂಗಳ ನರಕಯಾತನೆಯ ಬಳಿಕ ಈ ಯುವಕರು ಹಂತ ಹಂತವಾಗಿ ತವರಿನತ್ತ ಬರುತ್ತಿದ್ದಾರೆ.

ಅಭಿಷೇಕ್‌ ಸೇರಿದಂತೆ 15 ಮಂದಿಯ ಮೊದಲ ತಂಡ ಈಗ ಭಾರತಕ್ಕೆ ಬಂದು ತಲುಪಿದೆ. ಭಾನುವಾರ ಮಧ್ಯಾಹ್ನ ಮುಂಬೈ ತಲುಪಿದ್ದ ಅಭಿಷೇಕ್‌, ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಮಂಗಳೂರಿಗೆ ಬಂದಿಳಿದರು. ನಂತರ ಕುಟುಂಬದ ಸದಸ್ಯರೊಂದಿಗೆ ಬಡಾಜೆಗೆ ತೆರಳಿದರು.

ADVERTISEMENT

ಹೇಳಿದ ಉದ್ಯೋಗವೇ ಇರಲಿಲ್ಲ: ‘ನನಗೆ ಬೈಕ್‌ ರೈಡರ್‌ ಕೆಲಸ ಕೊಡಿಸುವುದಾಗಿ ಏಜೆನ್ಸಿಯವರು ಭರವಸೆ ನೀಡಿದ್ದರು. ಆದರೆ, ಕುವೈತ್‌ನಲ್ಲಿ ಅಂತಹ ಕೆಲಸವೇ ಇರಲಿಲ್ಲ. ಮಂಗಳೂರಿನಿಂದ ತೆರಳಿದ್ದ 34 ಜನರಲ್ಲಿ ಎಂಟು ಮಂದಿಗೆ ಮಾತ್ರ ಕೆಲಸ ನೀಡಿದರು. ಉಳಿದವರಿಗೆ ಪರವಾನಗಿ, ಗುರುತಿನ ಚೀಟಿ, ಕೌಶಲದ ಕೊರತೆಯ ಕಾರಣ ನೀಡಿ ಕೆಲಸ ನೀಡಿರಲಿಲ್ಲ’ ಎಂದು ಅಭಿಷೇಕ್‌ ‘ಪ್ರಜಾವಾಣಿ’ಗೆ ವಿವರಿಸಿದರು.

‘ಜನವರಿಯಲ್ಲಿ ಕುವೈತ್‌ಗೆ ಹೋಗಿದ್ದೆವು. ಮೊದಲ ಮೂರು ತಿಂಗಳು ಒಂದಷ್ಟು ವೇತನ ಕೊಟ್ಟರು. ನಂತರ ಹಣ ನೀಡುವುದನ್ನು ನಿಲ್ಲಿಸಿದರು. ಅನ್ನ, ನೀರಿಗೂ ಪರದಾಡುವಂತಾಯಿತು. ಉಪವಾಸ ಇದ್ದು ಸಹಿಸಿಕೊಳ್ಳುವುದೇ ನಮಗಿದ್ದ ದಾರಿ. ಕೊಠಡಿಯಲ್ಲೇ ಕುಳಿತು ಉಪವಾಸದಿಂದ ದಿನ ಕಳೆಯುತ್ತಿದ್ದೆವು’ ಎಂದು ತಿಳಿಸಿದರು.

ಮಾಣಿಕ್ಯ ಮ್ಯಾನ್‌ಪವರ್‌ ಕನ್ಸಲ್ಟೆನ್ಸಿ ಪ್ರತಿಯೊಬ್ಬರಿಂದ ₹ 65,000 ಪಡೆದು ವಂಚಿಸಿತ್ತು. ಅಲ್ಲಿ ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು ಎಂಬುದೂ ಗೊತ್ತಿರಲಿಲ್ಲ. ಒಂದು ದಿನ ಸಂಕಷ್ಟದ ಕುರಿತು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಯಿತು. ನಂತರ ಅನೇಕರು ನೆರವಿಗೆ ಧಾವಿಸಿದರು. ಆ ಪ್ರಯತ್ನ ಇಲ್ಲದಿದ್ದರೆ ಸಂತ್ರಸ್ತರಲ್ಲಿ ಒಬ್ಬರು ಕೂಡ ಊರು ತಲುಪುವುದು ಕಷ್ಟವಾಗಿತ್ತು ಎಂದರು.

15 ಮಂದಿಗೆ ದಂಡ:‘ಮಂಗಳೂರಿನ 19 ಮಂದಿ ಬುಧವಾರ ವಾಪಸು ಬರುತ್ತಾರೆ. ನಮ್ಮ ಜೊತೆ ಬಂದವರ ಪೈಕಿ 15 ಜನರಿಗೆ ಕೆಲಸ ನೀಡಿದ್ದ ಕಂಪೆನಿ ದೊಡ್ಡ ಮೊತ್ತದ ದಂಡ ವಿಧಿಸಿದೆ. ಅವರ ಪಾಸ್‌ಪೋರ್ಟ್‌ಗಳು ಇನ್ನೂ ಕಂಪೆನಿ ಬಳಿಯಲ್ಲೇ ಉಳಿದಿವೆ. ದಂಡ ಪಾವತಿಸಿದ ಬಳಿಕವೇ ಅವರು ದೇಶಕ್ಕೆ ಮರಳಲು ಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.