ADVERTISEMENT

ಮಂಗಳೂರು ವಿ.ವಿ| ಭಾಷೆ ಬೆಳವಣಿಗೆಗೆ ತಂತ್ರಜ್ಞಾನ ಬಳಕೆಯಾಗಲಿ: ಬಿ.ಎ.ವಿವೇಕ್ ರೈ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 5:13 IST
Last Updated 10 ನವೆಂಬರ್ 2025, 5:13 IST
ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಬಿ.ಎ.ವಿವೇಕ ರೈ, ಪ್ರೊ.ಕೆ.ಚಿನ್ನಪ್ಪ ಗೌಡ, ಪ್ರೊ.ಅಭಯಕುಮಾರ್, ಪ್ರೊ.ಶಿವರಾಮ ಶೆಟ್ಟಿ, ಪ್ರೊ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ ಅವರನ್ನು ಸನ್ಮಾನಿಸಲಾಯಿತು 
ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಬಿ.ಎ.ವಿವೇಕ ರೈ, ಪ್ರೊ.ಕೆ.ಚಿನ್ನಪ್ಪ ಗೌಡ, ಪ್ರೊ.ಅಭಯಕುಮಾರ್, ಪ್ರೊ.ಶಿವರಾಮ ಶೆಟ್ಟಿ, ಪ್ರೊ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ ಅವರನ್ನು ಸನ್ಮಾನಿಸಲಾಯಿತು    

ಉಳ್ಳಾಲ: ತಂತ್ರಜ್ಞಾನ ಶಾಶ್ವತವಲ್ಲ. ನಾವು ಅದರ ಗುಲಾಮರಾಗಬಾರದು. ನಮ್ಮ ತಿಳಿವಳಿಕೆಯನ್ನು ಬಿಟ್ಟುಕೊಟ್ಟು ಕೃತಕ ಬುದ್ಧಿಮತ್ತೆಗೆ ದಾಸರಾಗದಿರೋಣ. ಕನ್ನಡವನ್ನು ಇಟ್ಟುಕೊಂಡೇ ಎಲ್ಲಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿರಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ್ ರೈ ಹೇಳಿದರು.‌

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಭಾನುವಾರ ನಡೆದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಅಧ್ಯಾಪಕ, ಸಿಬ್ಬಂದಿ ಒಕ್ಕೂಟವಾದ ಗಿಳಿವಿಂಡು ನಾಲ್ಕನೇ ಮಹಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1968ರಲ್ಲಿ ಮೊಳಕೆಯೊಡೆದ ಕನ್ನಡದ ಬೀಜ ಎಸ್‌ವಿಪಿ ಕನ್ನಡದ ಅಧ್ಯಯನ ಸಂಸ್ಥೆಯಾಗಿ ರೂಪುಗೊಂಡು ಹೆಮ್ಮರವಾಗಿ ಬೆಳೆಯುವುದರೊಂದಿಗೆ ಕನ್ನಡವನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಏಳು ತಲೆಮಾರುಗಳ ವಿದ್ಯಾರ್ಥಿಗಳು ಈ ಗಿಳಿವಿಂಡು ಸಮಾವೇಶದ ಮೂಲಕ ಕನ್ನಡದ ಮನಸ್ಸುಗಳನ್ಬು ಒಟ್ಟುಗೂಡಿಸಿರುವುದು ಸಂತಸ ತಂದಿದೆ ಎಂದರು.

ADVERTISEMENT

‘ಉಳ್ಳವರು ಶಿವಾಲಯ ಮಾಡುವರಯ್ಯ ಎಂದು ಅಂದು ಬಸವಣ್ಣ ಹೇಳಿದ್ದರು. ಆದರೆ ಇಂದು ಉಳ್ಳವರು ಆಂಗ್ಲ ಶಾಲೆಯ ಮಾಡುವರಯ್ಯ ಎಂಬಂತಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳು ಇಂಗ್ಲಿಷ್‌ ಮಾಧ್ಯಮವಾಗಿ ರೂಪುಗೊಳ್ಳುತ್ತಿವೆ. ಸಂವಹನಕ್ಕೆ ಮಾತ್ರ ಇಂಗ್ಲಿಷ್‌ ಇರಬೇಕು. ಕನ್ನಡವನ್ನು ಪ್ರೀತಿಸಿ ಪ್ರೋತ್ಸಾಹಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ‌.ಎಲ್.ಧರ್ಮ ಮಾತನಾಡಿ, ಮಂಗಳೂರು ವಿವಿಯ ಸ್ನಾತಕೋತ್ತರ ವಿಭಾಗಗಳು ಒಂದು‌ ಚಿಂತನೆಗೆ ಕಟ್ಟುಬೀಳದೆ ವಿವಿಧ ವಿಷಯಗಳಿಗೆ ತೆರೆದುಕೊಂಡು ಬೆಳೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕಳೆದ ಆರು ದಶಕಗಳಲ್ಲಿ ಅನನ್ಯವಾಗಿ ಬೆಳೆದು ಸಮಾಜಕ್ಕೆ ಆಸ್ತಿಯಾಗಿದ್ದಾರೆ ಎಂದು ಹೇಳಿದರು.

ಗಿಳಿವಿಂಡು ಅಧ್ಯಕ್ಷ ಪ್ರೊ.ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ನಾಗಪ್ಪಗೌಡ ವಂದಿಸಿದರು. ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಡಾ.ಸಬಿತಾ ಬನ್ನಾಡಿ ಅವರ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಗಿಳಿವಿಂಡು ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ನಾವು ಸಮ್ಮಿಶ್ರ ಸಂಸ್ಕೃತಿಯಲ್ಲಿ ಬೆಳೆದವರು. ತಮ್ಮದೇ ಸರಿ ಎನ್ನುವ ರಾಜಕೀಯದ ದಾರಿಗಿಂತ ಭಿನ್ನವಾಗಿ ಸಮ್ಮಿಶ್ರ ಸಂಸ್ಕೃತಿಯ ವಿವೇಕವನ್ನು ಎತ್ತಿಹಿಡಿಯಬೇಕು
ಪ್ರೊ.ವಿವೇಕ್ ರೈ ವಿಶ್ರಾಂತ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.