ADVERTISEMENT

ಉಳ್ಳಾಲ | ಅದ್ದೂರಿ ಕುಂಪಾಲಾಷ್ಟಮಿ; ಸ್ತಬ್ಧ ಚಿತ್ರಗಳ ಮೆರಗು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:07 IST
Last Updated 17 ಆಗಸ್ಟ್ 2025, 7:07 IST
ಕುಂಪಲದಲ್ಲಿ ನಡೆದ 28ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಮೆರವಣಿಗೆಯಲ್ಲಿ ಮೊಸರು ಕುಡಿಕೆ ಒಡೆಯಲಾಯಿತು
ಕುಂಪಲದಲ್ಲಿ ನಡೆದ 28ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಮೆರವಣಿಗೆಯಲ್ಲಿ ಮೊಸರು ಕುಡಿಕೆ ಒಡೆಯಲಾಯಿತು   

ಉಳ್ಳಾಲ: ‘ದೇಶ ಇದೀಗ ಅಭಿವೃದ್ಧಿಯ ಹಾದಿಯಲ್ಲಿರಲು ದೇಶದ ನಾಯಕತ್ವದ ಕಾರಣ. ಬಿಜೆಪಿ ಜಿಲ್ಲಾಧ್ಯಕ್ಷರು ಹಲವು ಸೋಲುಗಳನ್ನು ಎದುರಿಸಿ ಕಷ್ಟದಿಂದ ಮೇಲೆ ಬಂದು ಇದೀಗ ಜಿಲ್ಲೆಯ ಎಂಟು ಶಾಸಕರು ಅವರ ಮಾರ್ಗದರ್ಶನದಲ್ಲಿ ಮುಂದೆ ಹೋಗಬೇಕಿದೆ. ಇದು ಅವರ ಆರಾಧ್ಯ ಕೃಷ್ಣ ಪರಮಾತ್ಮನ ಆದರ್ಶಗಳನ್ನು ಪಾಲಿಸಿದ ಫಲವಾಗಿ ಸಾಧ್ಯವಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.

ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ನಡೆದ 28ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಕೃಷ್ಣ ಪರಮಾತ್ಮ ಎಲ್ಲರ ಕಷ್ಟಗಳನ್ನು ಸಹಿಸಿಕೊಂಡು ಮುನ್ನಡೆದವ, ಅವನಂತೆ ಪ್ರತಿಯೊಬ್ಬರೂ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಮುನ್ನಡೆಯಿರಿ. ಇದು ಜಿಲ್ಲಾಧ್ಯಕ್ಷರಿಂದ ಸಾಧ್ಯವಾಗಿದೆ. ಎಷ್ಟೇ ದಾಳಿಗಳು ದೇಶದ ಮೇಲೆ ನಡೆದರೂ ,ಧರ್ಮ, ಸಂಸ್ಕೃತಿ, ಸಂಸ್ಕಾರ ತಲೆ ಕೆಳಗಾಗಿಸಲು ಎಂದಿಗೂ ಬಿಟ್ಟಿಲ್ಲ. ಕೃಷ್ಣ ಮಂದಿರ ಇನ್ನಷ್ಟು ಉತ್ತುಂಗಕ್ಕೇರಲು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಲಿ. ತನ್ನ ಸಹಕಾರ ಸದಾ ಇರಲಿದೆ ಎಂದರು.

ADVERTISEMENT

ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ರವಿ ಗಣೇಶ್ ಮೊಗ್ರ, ಡಾ.ರಾಮಕೃಷ್ಣ ಶೆಟ್ಟಿ, ಉದ್ಯಮಿಗಳಾದ ದಿವಾಕರ್, ಶ್ರೀನಿವಾಸ್ ಶೇಟ್, ಸಂದೇಶ್ ಶೆಟ್ಟಿ, ಸತೀಶ್ ಪೂಜಾರಿ ಬಜಾಲ್, ಭರತ್ ಕುಮಾರ್, ಪ್ರಶಾಂತ್ ನಾಯಕ್, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ವಸಂತ್ ಕೆ. ಪೂಜಾರಿ, ತೊಕ್ಕೊಟ್ಟು ಭಟ್ನಗರದ ಜೈವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಪುರುಷೋತ್ತಮ್ ಗಟ್ಟಿ, ಅರ್ಚಕ ಪಿ.ತಿರುಮಲೇಶ್ ಭಟ್ ಅಸೈಗೋಳಿ, ಮಹಿಳಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರಶೇಖರ್, ಡಾ.ರಾಮಕೃಷ್ಣ ಶೆಟ್ಟಿ, ಶಾಂತಾ. ಆರ್ ಶೆಟ್ಟಿ ಉಪಸ್ಥಿತರಿದ್ದರು. ಪ್ರವೀಣ್ ಎಸ್.ಕುಂಪಲ ನಿರೂಪಿಸಿದರು. ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು.

ವೈಭವದ ಶೋಭಾಯಾತ್ರೆ:

ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಅದ್ಧೂರಿಯಿಂದ ಸಂಪನ್ನಗೊಂಡಿತು. ಹನುಮಾನ್ ನಗರದ ಶ್ರೀವೀರಾಂಜನೇಯ ವ್ಯಾಯಾಮ ಶಾಲೆಯಿಂದ ಮಂಗಳ ಕಳಸವನ್ನು ಮೆರವಣಿಗೆ ಮೂಲಕ ತರುವುದರ ಮೂಲಕ ಉತ್ಸವದ ಕಾರ್ಯಕ್ರಮ ಆರಂಭಗೊಂಡಿತು.

ಶ್ರೀಬಾಲಕೃಷ್ಣ ಬಾಲಗೋಕುಲ, ಶ್ರೀಬಾಲಕೃಷ್ಣ ಮಹಿಳಾ ಸೇವಾ ಸಮಿತಿ, ಬಗಂಬಿಲ ಸತ್ಯನಾರಾಯಣ ಮಂದಿರದ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯೂ ನಡೆಯಿತು. ಶ್ರೀಕೃಷ್ಣನ ವೈಭವದ ಶೋಭಾಯಾತ್ರೆಯಲ್ಲಿ ವಿವಿಧ ಸಂಘಟನೆಗಳು ನಿರ್ಮಿಸಿದ್ದ ಸ್ತಬ್ಧ ಚಿತ್ರಗಳು ಶೋಭಾಯಾತ್ರೆಗೆ ಮೆರುಗು ನೀಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.