ADVERTISEMENT

ಪವರ್ ಟಿವಿ ವಿಚಾರ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಐವನ್‌ ಡಿಸೋಜ ಆಗ್ರಹ

ರಾಜ್ಯ ಸರ್ಕಾರದಿಂದ ಮಾಧ್ಯಮ ಸ್ವಾತಂತ್ರ್ಯದಮನ: ಐವನ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 12:07 IST
Last Updated 29 ಸೆಪ್ಟೆಂಬರ್ 2020, 12:07 IST
ಐವನ್ ಡಿಸೋಜ
ಐವನ್ ಡಿಸೋಜ   

ಮಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದ ಪವರ್ ಟಿವಿ ವಿರುದ್ಧ ದಮನಕಾರಿ ನೀತಿ ಅನುಸರಿಸಲಾಗುತ್ತಿದ್ದು, ರಾಜ್ಯಪಾಲರು ಮಧ್ಯಪ್ರವೇಶಿಸಬೇಕು’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್‌ ಡಿಸೋಜ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವೊಂದು ತನ್ನ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಯಾಗಿ ದ್ವೇಷ ರಾಜಕಾರಣ ನಡೆಸಿದೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಕರಣವೊಂದರಲ್ಲಿ ₹24 ಕೋಟಿ ಹಗರಣ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಕರು ಶೇಷಾದ್ರಿಪುರಂನ ಬ್ಯಾಂಕ್‌ ಶಾಖೆಯೊಂದರ ಮೂಲಕ ₹7.44 ಕೋಟಿ ಪಡೆದಿದ್ದು, ಉಳಿದ ಹಣ ಇನ್ನೊಂದು ಬ್ಯಾಂಕ್ ಮೂಲಕ ಅವರ ಕಂಪನಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಸುದ್ದಿ ಮಾಡಿದ ಚಾನೆಲ್ ಮೇಲೆ ಬಲ ಪ್ರಯೋಗಿಸುವ ಮೂಲಕ ಬಾಯಿ ಮುಚ್ಚಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರೇರಣಾ ಟ್ರಸ್ಟ್ ಮೂಲಕ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರ ಕಳೆದುಕೊಂಡಿದ್ದರು. ಇದೀಗ ಮತ್ತೆ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಕಾಂಗ್ರೆಸ್‌ ಹೋರಾಟ ನಡೆಸಲಿದೆ’ ಎಂದರು.

ADVERTISEMENT

ಕಾಯ್ದೆ:

‘ಅಂದಾನಿ, ಅದಾನಿ ಮತ್ತಿತರ ಬಂಡವಾಳಶಾಹಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರೈತರು, ಕಾರ್ಮಿಕರು, ಬಡವರನ್ನು ಬಲಿ ಹಾಕಲು ಕೇಂದ್ರ ಹಾಗೂ ರಾಜ್ಯಗಳು ಸುಗ್ರೀವಾಜ್ಞೆ ಜಾರಿಗೊಳಿಸುತ್ತಿವೆ’ ಎಂದು ಐವನ್ ಖಂಡಿಸಿದರು.

‘ಭ್ರಷ್ಟಾಚಾರವನ್ನು ಬಯಲಿಗೆಳೆದ ಮಾಧ್ಯಮದ ವಿರುದ್ಧವೇ ದ್ವೇಷ ಸಾಧಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆಗಾಗಿ, ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್, ಪಿ.ಎಂ. ಮುಸ್ತಫಾ, ಎ.ಸಿ.ಜಯರಾಜ್ ಇದ್ದರು.

‘ಸರ್ಕಾರಿ ಪ್ರಾಯೋಜಿತ ಮರಣ’

ಕೋವಿಡ್–19ಗೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಯೋಜಿತ ಮರಣಗಳು ಸಂಭವಿಸುತ್ತಿವೆ ಎಂದು ಐವನ್ ಡಿಸೋಜ ಆರೋಪಿಸಿದರು.

ಈ ಕುರಿತು ಕಾಂಗ್ರೆಸ್ ವಿಧಾನಮಂಡಲ ಅಧಿವೇಶನದಲ್ಲಿ ಗಮನ ಸೆಳೆದರೂ, ಸರ್ಕಾರ ದಾಖಲೆ ನೀಡಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಮ್ಲಜನಕ, ಪಿಪಿಇ ಕಿಟ್ ಸಮರ್ಪಕವಾಗಿಲ್ಲ. ಜನತೆಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ತುರ್ತು ಸಂದರ್ಭದಲ್ಲೂ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.