
ಬೆಳ್ತಂಗಡಿ: ಶುಕ್ರವಾರ ಬೆಳಿಗ್ಗೆ ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ-1 ಗ್ರಾಮದ ಅಂಡಿರ್‌ಮಾರ್ ಬಳಿ ನಡೆದಿದೆ.
ಮಂಜಪ್ಪ ನಾಯ್ಕ (62) ಅವರ ಕಾಲಿಗೆ ಚಿರತೆ ಕಚ್ಚಿದ ಗಾಯವಾಗಿದ್ದು, ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜಪ್ಪ ಅವರು ಮನೆಯಂಗಳದಲ್ಲಿ ನಿಂತಿದ್ದಾಗ ಕಾಡಿನಿಂದ ಚಿರತೆ ಓಡಿ ಬಂದು ದಾಳಿ ನಡೆಸಿದೆ. ಕೂಡಲೇ ಅವರು ಮನೆಯ ಬಳಿಯ ಅಡಿಕೆ ಮರ ಹತ್ತಿದ್ದಾರೆ. ಅವರ ಹಿಂದೆಯೇ ಬಂದ ಚಿರತೆ ಮರಕ್ಕೆ ಹತ್ತುತ್ತಿದ್ದ ಮಂಜಪ್ಪ ಅವರ ಕಾಲಿಗೆ ಕಚ್ಚಿ ಕೆಳಗೆ ಎಳೆಯಲು ಪ್ರಯತ್ನಿಸಿದೆ. ಕೂಗಿಕೊಂಡಾಗ ಮನೆಯವರು ಓಡಿ ಬಂದಿದ್ದು, ಅವರನ್ನು ಕಂಡ ಚಿರತೆ ಕಾಡಿಗೆ ಓಡಿಹೋಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ದಾಳಿಯಿಂದ ಪಾರಾದ ಬಾಲಕ: ಮುಂಡಾಜೆ ಗ್ರಾಮದ ಸೀಟು- ಕಾಯರ್ತೋಡಿ ರಸ್ತೆಯಲ್ಲಿ ಶಾಲೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಮುಂಡಾಜೆ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ, ಕಲ್ಮಂಜ ಗ್ರಾಮದ ಜ್ಞಾನೇಶಗೆ ಚಿರತೆ ಎದುರಾಗಿದ್ದು, ಭಯಗೊಂಡ ಆತ ತಕ್ಷಣ ಮನೆಗೆ ಹಿಂದಿರುಗಿದ್ದಾನೆ.
ಮುಂಡಾಜೆ ಗ್ರಾಮದ ಸೀಟು-ಕಾರ್ಯರ್ತೋಡಿ ರಸ್ತೆಯ ಮೂರು ಮಾರ್ಗದ ಬಳಿ ಶುಕ್ರವಾರ ಬೆಳಿಗ್ಗೆ 7.30ರವೇಳೆಗೆ ಘಟನೆ ನಡೆದಿದೆ. ಗ್ರಾಮಸ್ಥರು ಎಚ್ಚರ ವಹಿಸುವಂತೆ ಮುಂಡಾಜೆ ಗ್ರಾಮ ಪಂಚಾಯಿತಿ ವತಿಯಿಂದ ಎಚ್ಚರಿಕೆ ನೀಡಲಾಗಿದೆ.
ಕಡಿರುದ್ಯಾವರದಲ್ಲಿ ಕಾಣಿಸಿಕೊಂಡ ನಾಲ್ಕು ಚಿರತೆ: ಶುಕ್ರವಾರ ಬೆಳಿಗ್ಗೆ ಕಡಿರುದ್ಯಾವರ ಗ್ರಾಮದಲ್ಲಿ ನಾಲ್ಕು ಚಿರತೆಗಳು ಕಾಣಿಸಿಕೊಂಡಿವೆ. ಕಡಿರುದ್ಯಾವರ ಗ್ರಾಮದ ಕಾನರ್ಪದ ನೂಜಿ ಬಳಿ ಸ್ಥಳೀಯರು ಚಿರತೆಯನ್ನು ಕಂಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಅವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್‌ಗೆ ಕಾರ್ಮಿಕರು ಹೋದಾಗ ಚಿರತೆಗಳು ಕಂಡು ಬಂದಿದ್ದವು. ಒಂದು ದೊಡ್ಡ ಚಿರತೆಯ ಜತೆ ಮೂರು ಮರಿ ಚಿರತೆಗಳು ಇದ್ದವು. ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು ಪರಿಸರದ ಕಾಡಿನಲ್ಲಿ ಅವು ಓಡಾಡುತ್ತಿವೆ.
ಹಲವು ಚಿರತೆಗಳಿರುವ ಶಂಕೆ: ತಾಲ್ಲೂಕಿನಲ್ಲಿ ಹಲವು ಚಿರತೆಗಳು ಓಡಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಸುಮಾರು ಒಂದೂವರೆ ತಿಂಗಳಿನಿಂದ ತಾಲ್ಲೂಕಿನ ವಿವಿಧೆಡೆ ಚಿರತೆಗಳ ಹಾವಳಿ ಹೆಚ್ಚಿದೆ. ನಾಡಿಗೆ ಬರುವ ಚಿರತೆಗಳಿಗೆ ಸುಲಭವಾಗಿ ಆಹಾರ, ನೀರು ಸಿಗುವ ಕಾರಣ ಅವು ಜನ ನಿಬಿಡ ಪ್ರದೇಶಗಳಲ್ಲೂ ಸುಳಿದಾಡುತ್ತಿವೆ. ಅರಣ್ಯ ಇಲಾಖೆ ಚಾರಣಗಳಿಗೆ ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.