ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರೆಲ್ಲರೂ ತಲೆಮಾರುಗಳಿಂದ ಪರಸ್ಪರ ಪ್ರೀತಿ, ನಂಬಿಕೆ ಇಟ್ಟು ಒಗ್ಗಟ್ಟಿನಿಂದ ಬದುಕಿದ್ದಾರೆ. ಈಚೆಗೆ ನಡೆದ ಕೆಲ ಘಟನೆಗಳು ಎಲ್ಲರನ್ನೂ ನೋಯಿಸಿರಬಹುದು. ಆದರೂ ಮಾನವೀಯತೆಯ ವಿರುದ್ಧ ದ್ವೇಷ ಮೇಲುಗೈ ಸಾಧಿಸಲು ಬಿಡಬಾರದು. ಹಿಂಸೆಯು ಭವಿಷ್ಯವನ್ನು ವ್ಯಾಖ್ಯಾನಿಸಲು ಅವಕಾಶ ನೀಡಬಾರದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
‘ನಮ್ಮ ಹಿರಿಯರು ಒಂದೇ ಶಾಲೆಯಲ್ಲಿ ಕಲಿತು, ಒಂದೇ ಮಾರುಕಟ್ಟೆಯಲ್ಲಿ ಕೆಲಸ ಮಾಡಿ, ಒಟ್ಟಿಗೆ ಹಬ್ಬ ಆಚರಿಸಿದವರು ನಾವು. ಅಂತಹ ಸಾಮರಸ್ಯದ ಜಿಲ್ಲೆಯನ್ನು ನೋಡಿ ಬೆಳೆದ ನಮಗೆ, ನಮ್ಮ ಕೈಗಳನ್ನು ಕಳೆದುಕೊಳ್ಳುವುದು ಅಸಾಧ್ಯ. ನಾವು ಇದಕ್ಕೆ ಯಾವುದೇ ಅವಕಾಶವನ್ನು ನೀಡಬಾರದು.’
‘ಜಿಲ್ಲೆಯಲ್ಲಿ ಈಚೆಗೆ ನಡೆದ ಹಿಂಸಾಚಾರ, ದ್ವೇಷ ಭಾಷಣ ಸಮುದಾಯಗಳ ನಡುವಿನ ಆತಂಕ ಮೂಡಿಸುವ ಕೃತ್ಯಗಳು ಆಂತರಿಕವಾಗಿ ತೀವ್ರವಾಗಿ ಘಾಸಿಗೊಳಿಸಿದೆ. ನಾವೀಗ ಬಹಳ ಸೂಕ್ಷ್ಮ ಕಾಲಘಟ್ಟದಲ್ಲಿದ್ದೇವೆ. ಎಲ್ಲರ ಹೃದಯಗಳು ನೋವಿನಿಂದ ತುಂಬಿವೆ, ಮನಸ್ಸುಗಳು ಕೋಪದಿಂದ ಕುರುಡಾಗಿವೆ. ಕುದಿಯುವ ನೀರು ಹೇಗೆ ಪ್ರತಿಬಿಂಬವಾಗಲು ಸಾಧ್ಯವಿಲ್ಲವೋ ಹಾಗೆಯೇ, ಮನಸ್ಸು ಉದ್ವಿಗ್ನಗೊಂಡಾಗ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸರಿ-ತಪ್ಪುಗಳ ವಿಶ್ಲೇಷಣೆ ಅಸಾಧ್ಯವಾಗುತ್ತದೆ. ಆದ್ದರಿಂದ ಭವಿಷ್ಯದ, ಸಾಮರಸ್ಯದ ಸಮಾಜದ ಉಳಿವಿಗಾಗಿ ನಾವು ತಾಳ್ಮೆಯಿಂದ, ಜವಾಬ್ದಾರಿಯುತವಾಗಿ, ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣೆ ಮಾಡಬೇಕಾಗಿದೆ.’
‘ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿಸುವ ವದಂತಿಗಳು, ದ್ವೇಷದ ಹೇಳಿಕೆಗಳು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ. ಕೋಪ, ಭಯ ಅಥವಾ ದ್ವೇಷದಿಂದ ಪ್ರತಿಕ್ರಿಯಿಸುವ ಸಮಯ ಇದಲ್ಲ. ಶಾಂತಿ, ಘನತೆ ಮತ್ತು ಪ್ರತಿಯೊಂದು ಧರ್ಮವನ್ನು ಗೌರವಿಸುವ ನಮ್ಮ ನೈತಿಕ ಮೌಲ್ಯಗಳೊಂದಿಗೆ ದೃಢವಾಗಿ ನಿಂತು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸುವ ಸಮಯ ಇದು’ ಎಂದು ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ದ್ವೇಷ ಹರಡುವ, ಸಮಾಜವನ್ನು ವಿಭಜಿಸಲು ಯತ್ನಿಸುವ ಶಕ್ತಿಗಳ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಏನೇ ಇರಲಿ, ನಾವು ಒಗ್ಗಟ್ಟಿನಿಂದ, ತಾಳ್ಮೆಯಿಂದ, ಪರಸ್ಪರ ಪ್ರೀತಿಯಿಂದ, ವಿಶ್ವಾಸದಿಂದ, ದಯೆಯಿಂದ ಮತ್ತು ಶಾಂತಿಯಿಂದ ಇರಬೇಕಾದ ಸಮಯ ಇದು’ ಎಂದರು.
‘ಎಲ್ಲಾ ಧರ್ಮಗಳ ಮುಖಂಡರು ಮತ್ತು ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅರ್ಥಪೂರ್ಣ ಮಾತುಕತೆಯ ಮೂಲಕ ಸಮಾಜದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ಈಗ ಎಚ್ಚರಿಕೆಯಿಂದ ವರ್ತಿಸಬೇಕು - ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲಗೊಳಿಸುವ ಬದಲು, ಶಾಂತಿಯತ್ತ ಸಾಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಅವರು ತಿಳಿಸಿದ್ದಾರೆ.
‘ಏಕತೆ ನಮ್ಮ ಶಕ್ತಿ. ಸಹಿಷ್ಣುತೆ ನಮ್ಮ ಮೌಲ್ಯ. ಮತ್ತು ಶಾಂತಿ ನಮ್ಮ ಗುರಿ, ಈ ಮೌಲ್ಯಗಳೊಂದಿಗೆ ನಾವು ಧೈರ್ಯದಿಂದ ಮುಂದುವರಿಯೋಣ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಬ್ದುಲ್ ರಹಿಮಾನ್ ಮನೆಗೆ ಖಾದರ್ ಭೇಟಿ
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಮನೆಗೆ ಬುಧವಾರ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ರಹಿಮಾನ್ ತಂದೆ ಅಬ್ದುಲ್ ಖಾದರ್ ತಾಯಿ ಐಸಮ್ಮ ಪತ್ನಿ ಫಾತಿಮತ್ ನುಸ್ರಾ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಈ ಘಟನೆ ನಡೆದಾಗ ನಾನು ಹಜ್ ಯಾತ್ರೆಯಲ್ಲಿದ್ದೆ. ಅಬ್ದುಲ್ ರಹಿಮಾನ್ ಕೊಲೆ ಜಿಲ್ಲೆಯ ಸೌಹಾರ್ದಕ್ಕೆ ಕೊಡಲಿ ಏಟು. ಯುವಕನನ್ನು ಕರೆದುಕೊಂಡು ಕೆಲಸ ಮಾಡಿಸಿ ಅವರಿಗೆ ವೇತನ ಕೊಡುವುದು ಧರ್ಮ. ಕೆಲಸ ಮಾಡಿಸಿದ ಜಾಗದಲ್ಲಿ ಪ್ರಾಣ ತೆಗೆಯುವುದು ಹೇಯ ಕೃತ್ಯ’ ಎಂದರು.
ಸಮಾಜದ ಎಲ್ಲರೂ ಖಂಡಿಸಿದ್ದಾರೆ. ಯಾವ ಸಮಾಜವೂ ಇಂತಹ ಕೃತ್ಯವನ್ನು ಒಪ್ಪುವುದಿಲ್ಲ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ರಹಿಮಾನ್ ಕುಟುಂಬದವರು ಒತ್ತಾಯಿಸಿದ್ದಾರೆ. ಈ ರೀತಿಯ ಘಟನೆ ಮರುಕಳಿಸಬಾರದು. ಊರಿನಲ್ಲಿ ಬಾಂಧವ್ಯ ಮರಳಬೇಕು ಎಂದು ಸ್ಥಳೀಯರು ಕನಸು ಕಂಡಿದ್ದಾರೆ. ಈ ಊರಿನಲ್ಲಿ ವಿಶ್ವಾಸ ಮೂಡಿಸುವಂತೆ ಸರ್ಕಾರ ಕ್ರಮ ವಹಿಸಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಮಂಗಳೂರಿನ ಪೊಲೀಸ್ ಕಮಿಷನರ್ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಚರ್ಚಿಸಿದ್ದೇನೆ’ ಎಂದರು.
ಪರಿಹಾರದ ಬಗ್ಗೆ ಸಂತ್ರಸ್ತ ಕುಟುಂಬದ ಅಪೇಕ್ಷೆ ಏನು ಎಂಬ ಬಗ್ಗೆ ಸಮಾಲೋಚಿಸಿ ಸರ್ಕಾರ ಕ್ರಮವಹಿಸಲಿದೆ. ಮುಖ್ಯ ಮಂತ್ರಿ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು ಕುಳಿತು ಚರ್ಚಿಸಿ ಸಂತ್ರಸ್ತ ಕುಟುಂಬದ ನೋವನ್ನು ಶಮನ ಗೊಳಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
‘ಕಮಿಷನರ್ ಎಸ್ಪಿ ವರ್ಗ ಪೂರ್ವ ನಿರ್ಧರಿತ’
‘ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಬದಲಾಯಿಸುವ ಬಗ್ಗೆ ನಾನು ಹಜೆ ಯಾತ್ರೆಗೆ ತೆರಳುವ ಮುನ್ನವೇ ತೀರ್ಮಾನ ಕೈಗೊಳ್ಳಲಾಗಿತ್ತು. ಆ ಆದೇಶ ಜಾರಿಯಾಗುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ’ ಎಂದು ಯು.ಟಿ.ಖಾದರ್ ತಿಳಿಸಿದರು.
‘ಹಿಂದಿನ ಕಮಿಷನರ್ ಅವರನ್ನು ಖುದ್ದಾಗಿ ಮನೆಗೆ ಕರೆಸಿಕೊಂಡಿದ್ದ ನಾನು ಸಾಮಾಜಿಕ ಜಾಲತಾಣಗಳಲ್ಲಿ ಸವಾಲು ಹಾಕಿದವರ ಹಾಗೂ ದ್ವೇಷ ಭಾಷಣ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಅದು ಈಡೇರದ ಕಾರಣ ಡಿಜಿಪಿ ಮತ್ತು ಗೃಹಸಚಿವರ ಜೊತೆ ಆ ಬಗ್ಗೆ ಚರ್ಚಿಸಿದ್ದೆ. ಮಂಗಳೂರಿನ ಅಧಿಕಾರಿಗಳು ಕ್ರಿಯಾಶೀಲವಾಗಿದ್ದರೆ ಸಾಲದು ಮುಂದಾಲೋಚನೆ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.