ADVERTISEMENT

ಮಂಗಳೂರು: ಮದ್ಯ ಮಾರಾಟ ನಿಷೇಧ– ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 5:05 IST
Last Updated 28 ಡಿಸೆಂಬರ್ 2022, 5:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕೃಷ್ಣಾಪುರದ ಅಬ್ದುಲ್‌ ಜಲೀಲ್ ಹತ್ಯೆ ಪ್ರಕರಣದ ಬಳಿಕ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಸುರತ್ಕಲ್‌, ಪಣಂಬೂರು, ಬಜಪೆ ಹಾಗೂ ಕಾವೂರು ಠಾಣೆಗಳ ವ್ಯಾಪ್ತಿಯಲ್ಲಿ ಜಾರೊಗೊಳಿಸಿದ್ದ ಮದ್ಯ ಮಾರಾಟ ನಿಷೇಧವನ್ನು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅವರು ಹಿಂದಕ್ಕೆ ಪಡೆದಿದ್ದಾರೆ.

‘ಈ ಪ್ರಕರಣದ ಆರೋಪಿಗಳ ಬಂಧನವಾಗಿದ್ದು, ಈ ನಾಲ್ಕು ಠಾಣೆಗಳ ವ್ಯಾಪ್ತಿಯ ಪ್ರದೇಶಗಳು ಸಹಜ ಸ್ಥಿತಿಗೆ ಬಂದಿವೆ ಎಂದು ನಗರ ಪೊಲೀಸ್‌ ಕಮಿಷನರ್‌ ಅವರು ಪ್ರಸ್ತಾವ ಸಲ್ಲಿಸಿದ್ದಾರೆ. ಹಾಗಾಗಿ ಈ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿಇದೇ 29ರ ಬೆಳಿಗ್ಗೆ 10ರವರೆಗೆ ಜಾರಿಗೊಳಿಸಿದ್ದ ಮದ್ಯ ಮಾರಾಟ ನಿಷೇಧವನ್ನು ಹಿಂಪಡೆಯಲಾಗಿದೆ’ ಎಂದು ಜಿಲ್ಲ್ಲಾಧಿಕಾರಿ ಅವರು ಮಂಗಳವಾರ ಆದೇಶ ಮಾಡಿದ್ದಾರೆ.

ಈ ನಾಲ್ಕು ಠಾಣೆಯ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 144ರ ಅಡಿ ಇದೇ 29ರ ಬೆಳಿಗ್ಗೆ 6ರವರೆಗೆ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಸಡಿಲಗೊಳಿಸಿ ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಮಂಗಳವಾರ ಆದೇಶ ಮಾಡಿದ್ದಾರೆ.

ADVERTISEMENT

’ನಿಷೇಧಾಜ್ಞೆ ಜಾರಿಯಲ್ಲಿರುವ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪುಗೂಡುವುದು ಹಾಗೂ ಶಸ್ತ್ರಾಸ್ತ್ರ ಒಯ್ಯುವುದಕ್ಕೆ ವಿಧಿಸಿರುವ ನಿಷೇಧ ಮುಂದುವರಿಯಲಿದೆ’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.