ADVERTISEMENT

ಆ. 14 ರಂದು ಲೋಕ ಅದಾಲತ್‌ ಆಯೋಜನೆ

ಜಿಲ್ಲೆಯಲ್ಲಿ 5 ಸಾವಿರ ಪ್ರಕರಣಗಳ ಇತ್ಯರ್ಥಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 0:52 IST
Last Updated 7 ಆಗಸ್ಟ್ 2021, 0:52 IST

ಮಂಗಳೂರು: ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ವರ್ಷಕ್ಕೆ 3 ಬಾರಿ ಲೋಕ ಅದಾಲತ್ ನಡೆಯುತ್ತಿದ್ದು, ಆ.14ರಂದು ರಾಜ್ಯದ ಎಲ್ಲ ನ್ಯಾಯಾಲಯದಲ್ಲೂ ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಲೋಕ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್ ಜಿ. ವರ್ಣೇಕರ್ ತಿಳಿಸಿದರು.

ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾನೂನು ಸೇವಾ ಸಮಿತಿಯ ನಿರ್ದೇಶನದ ಮೇರೆಗೆ ಈ ಅದಾಲತ್ ನಡೆಯುತ್ತಿದೆ. ಈ ಲೋಕ ಅದಾಲತ್ ರಾಜಿ ಸಂಧಾನದ ಮೂಲಕ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳು ಹಾಗೂ ಪೂರ್ವ ವ್ಯಾಜ್ಯ ಪ್ರಕರಣಗಳು ವಿಚಾರಣೆಗೆ ಬರಲಿವೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮುರಳೀಧರ್ ಪೈ ನೇತೃತ್ವದಲ್ಲಿ ನಡೆಯಲಿದೆ. ಲೋಕ ಅದಾಲತ್‌ನಲ್ಲಿ ಯಾರಿಗೂ ಅನ್ಯಾಯವಾಗದಂತೆ ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಿದೆ. ಇದರಿಂದ ಹಣ, ಸಮಯದ ಉಳಿತಾಯವು ಆಗಲಿದೆ ಎಂದರು.

ADVERTISEMENT

ಲೋಕ ಅದಾಲತ್ ಜಿಲ್ಲೆಯಾದ್ಯಂತ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯದಲ್ಲಿ ನಡೆಯಲಿದ್ದು, 15 ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಮೋಟಾರು ವಿಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯ ಮುಖ್ಯಸ್ಥರನ್ನು ಕರೆಯಿಸಿ ಇತ್ಯರ್ಥ ಮಾಡಲಾಗುವುದು. ಮುಖ್ಯ ನ್ಯಾಯಮೂರ್ತಿ ಓಕಾ ಕೂಡಾ ವಿಮಾ ಕಂಪನಿಗಳಿಗೆ ವರ್ಚುವಲ್ ಮೀಟಿಂಗ್ ಮಾಡಿ, ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 52 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಇವುಗಳಲ್ಲಿ 37,200 ಪ್ರಕರಣಗಳಲ್ಲಿ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮಾಡಬಹುದಾಗಿದೆ. ಪ್ರಕರಣವಾಗಿದೆ. ಈ ಬಾರಿಯ ಅದಾಲತ್‌ಗೆ 5 ಸಾವಿರ ಪ್ರಕರಣಗಳ ಇತ್ಯರ್ಥಕ್ಕೆ ಶಿಫಾರಸು ಮಾಡಲಾಗಿದೆ. ಕಳೆದ ಬಾರಿ ಲೋಕ ಅದಾಲತ್‌ನಲ್ಲಿ 4,700 ಪ್ರಕರಣಗಳು ಇತ್ಯರ್ಥವಾಗಿದ್ದವು. ಲೋಕ ಅದಾಲತ್‌ನಲ್ಲಿ 26 ಬೆಂಚ್‌ಗಳಿದ್ದು, 26 ನ್ಯಾಯಾಧೀಶರು, 26 ವಕೀಲರು ಇರುತ್ತಾರೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.