ಕರ್ನಾಟಕ ಲೋಕಾಯುಕ್ತ
– ಪ್ರಜಾವಾಣಿ ಚಿತ್ರ
ಪುತ್ತೂರು: ಮಂಗಳೂರು ಲೋಕಾಯುಕ್ತ ಪೊಲೀಸ್ ಕಚೇರಿಯಲ್ಲಿ ಸೆ. 1ರಂದು ವಿಚಾರಣೆಗೆ ಹಾಜರಾಗುವಂತೆ ಪುತ್ತೂರು ತಹಶೀಲ್ದಾರ್ ಎಸ್.ಬಿ. ಕೂಡಲಗಿಗೆ ನೋಟಿಸ್ ನೀಡಲಾಗಿದೆ.
ಅಕ್ರಮ– ಸಕ್ರಮ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಲು ಲಂಚ ಪಡೆದ ಆರೋಪದಲ್ಲಿ ಪುತ್ತೂರು ತಾಲ್ಲೂಕು ಕಚೇರಿಯ ಭೂಸುಧಾರಣೆ ಶಾಖೆಯ ಕೇಸ್ ವರ್ಕರ್ ಸುನಿಲ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಬಳಿಕ ತಹಶೀಲ್ದಾರ್ ತಲೆಮರೆಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸುನಿಲ್ ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಲೋಕಾಯಕ್ತ ಪೊಲೀಸರು ತಿಳಿಸಿದ್ದರು.
ಎಸ್.ಬಿ. ಕೂಡಲಗಿ ಅವರು, ಶುಕ್ರವಾರ ಮತ್ತು ಶನಿವಾರವೂ ಕಚೇರಿಗೆ ಬಂದಿರಲಿಲ್ಲ. ‘ಎರಡು ದಿನಗಳ ರಜೆ ಪಡೆಯಲು ತಹಶೀಲ್ದಾರ್ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ರಜೆ ಮಂಜೂರಾಗಿದೆಯೇ ಎಂಬ ವಿಚಾರ ನನಗೆ ತಿಳಿದಿಲ್ಲ’ ಎಂದು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ತಿಳಿಸಿದ್ದಾರೆ.
ಸುನಿಲ್ ಅವರನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ತಹಶೀಲ್ದಾರ್ ನಾಪತ್ತೆಯಾಗಿರುವ ವಿಚಾರವನ್ನು ಲೋಕಾಯುಕ್ತ ಪೊಲೀಸರು ಉಪವಿಭಾಗಾಧಿಕಾರಿ ಗಮನಕ್ಕೆ ತಂದಿದ್ದರು. ಉಪವಿಭಾಗಾಧಿಕಾರಿ ಉಪ ತಹಶೀಲ್ದಾರ್‌ಗೆ ಪತ್ರ ಮೂಲಕ ಜವಾಬ್ದಾರಿ ನೀಡಿ, ತನಿಖೆಗೆ ಬೇಕಾದ ಸಹಕಾರ ನೀಡುವಂತೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.