ಸಾವು
(ಪ್ರಾತಿನಿಧಿಕ ಚಿತ್ರ)
ಶಿರಾಡಿ (ಉಪ್ಪಿನಂಗಡಿ): ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ 5 ದಿನಗಳ ಹಿಂದೆ ಮಗುಚಿ ಬಿದ್ದ ಲಾರಿಯ ಚಾಲಕ ಪ್ರೇಮ್ ಕುಮಾರ್ (38) ಎಂಬುವರ ಮೃತದೇಹ ಕೊಡ್ಯಕಲ್ಲು ಹಳ್ಳದಲ್ಲಿ ಪತ್ತೆಯಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಕೊಡ್ಯಕಲ್ಲು ಎಂಬಲ್ಲಿ ಅಪಘಾತಕ್ಕೀಡಾಗಿತ್ತು. ಅಪಘಾತದ ಬಳಿಕ ಲಾರಿ ಚಾಲಕ ಮನೆಯವರಿಗೆ ಮತ್ತು ಮಾಲೀಕರಿಗೆ ಕರೆ ಮಾಡಿ ಅಪಘಾತವಾಗಿರುವ ಮಾಹಿತಿ ತಿಳಿಸಿದ್ದರು. ಬಳಿಕ ಚಾಲಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಘಟನೆ ನಡೆದ 3 ದಿನಗಳ ಬಳಿಕ ಕೊಡ್ಯಕಲ್ಲು ಪರಿಸರದ ಹಳ್ಳವೊಂದರಲ್ಲಿ ಪುರುಷನ ಶವ ಪತ್ತೆಯಾಗಿದ್ದು, ಲಾರಿ ಚಾಲಕನ ಮನೆಯವರು ಬಂದು ನೋಡಿದಾಗ ಮೃತದೇಹ ಪ್ರೇಮ್ ಕುಮಾರ್ ಅವರದ್ದು ಎಂದು ಖಚಿತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಉಕ್ಕುಂದ ಗ್ರಾಮದ ನಿವಾಸಿ ಅಂಬಿಕಾಪತಿ ಎಂಬುವರ ಪುತ್ರ ಪ್ರೇಮ್ ಕುಮಾರ್ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಈ ಮಧ್ಯೆ ಶವ ದೊರೆತ ಹಳ್ಳದ ಸ್ಥಳಕ್ಕೆ ಅವರು ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದೆ. ಅಪಘಾತವಾದ ಸ್ಥಳಕ್ಕೂ ಶವ ದೊರೆತ ಸ್ಥಳಕ್ಕೂ ಸುಮಾರು 200 ಮೀಟರ್ ಅಂತರವಿದ್ದು, ದಾರಿಯೂ ಸಮರ್ಪಕವಾಗಿಲ್ಲ. ಹಣೆಯಲ್ಲಿ ಗಾಯ ಮತ್ತು ಮೂಗಿನಲ್ಲಿ ರಸ್ತೆ ಸುರಿಯುತ್ತಿದ್ದ ಲಕ್ಷಣಗಳು ಮಾತ್ರ ಮೇಲ್ನೋಟಕ್ಕೆ ಕಾಣಿಸಿದ್ದು, ಶವದ ಮರಣೋತ್ತರ ಪರೀಕ್ಷೆಯನ್ನು ಶನಿವಾರ ಮಂಗಳೂರಿನಲ್ಲಿ ನಡೆಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.