ಉಪ್ಪಿನಂಗಡಿ: ವಿದ್ಯಾರ್ಥಿಗಳಿಗೆ ನಮಾಜ್ ನಿರ್ವಹಣೆಯಿಂದ ಪ್ರಾರಂಭಗೊಂಡು ಪ್ರತಿ ಹಂತದಲ್ಲೂ ಆಚಾರ-ವಿಚಾರ, ಸಂಸ್ಕಾರ, ಸತ್ಕರ್ಮಗಳನ್ನು ಬೋಧಿಸುವ ಮದ್ರಸದ ಸದರ್ ಮುಅಲ್ಲಿಂಗಳು (ಅಧ್ಯಾಪಕರು) ವಿದ್ಯೆಯ ರಾಯಭಾರಿಗಳು. ಅವರು ಸಮಾಜ ಮತ್ತು ಸಮುದಾಯಕ್ಕೆ ಮಾದರಿ ಆಗಿರಬೇಕು ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ತೋಡಾರ್ ಉಸ್ಮಾನ್ ಫೈಝಿ ಹೇಳಿದರು.
ಕಡಬ ತಾಲ್ಲೂಕು ಆತೂರು ಮುಹಿಯುದ್ದೀನ್ ಜುಮಾ ಮಸೀದಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಸದರ್ ಮುಅಲ್ಲಿಂ ಸಂಗಮ-ತಖ್ವೀಯಾ-2025 ಸಮಾರಂಭದಲ್ಲಿಜಿಲ್ಲಾ
ಜಂ-ಇಯ್ಯತ್ತುಲ್ ಮುಅಲ್ಲಿಮೀನ್ 50ನೇ ವಾರ್ಷಿಕೋತ್ಸವದ ಲೋಗೊ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲೇ ಎತ್ತರದ ಸ್ಥಾನದಲ್ಲಿರುವ ಸಮಸ್ತ ಕೇರಳ ಜಂ-ಇಯ್ಯತುಲ್ ಉಲೇಮಾ ಅಡಿಯಲ್ಲಿ ಕೆಲಸ ಮಾಡುವ ಸದರ್ ಮುಅಲ್ಲಿಂಗಳು ಸುನ್ನತ್ ಜಮಾಅತಿನ ಆದರ್ಶವನ್ನು ಎತ್ತಿ ಹಿಡಿದು ತಮ್ಮ ಸಂಸ್ಥೆಗೆ ಮತ್ತು ತಮಗೆ ಯಾವುದೇ ರೀತಿಯ ಚ್ಯುತಿ ಉಂಟಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಕೇಂದ್ರ ಮುಶಾವರ ಸದಸ್ಯ ಬಂಬ್ರಾಣ ಅಬ್ದುಲ್ ಖಾದರ್ ಅಲ್ಖಾಸಿಮಿ ಮಾತನಾಡಿ, ಸದರ್ ಉಸ್ತಾದ್, ಮುಅಲ್ಲಿಂಗಳು ಯಾವತ್ತೂ ದೂಷಣೆಗೆ ಒಳಗಾಗಬಾರದು, ಒಬ್ಬ ಅಧ್ಯಾಪಕನಲ್ಲಿ ಕಪ್ಪುಚುಕ್ಕಿ ಕಂಡರೂ ಅದು ಮುಅಲ್ಲಿಂ ಸಮೂಹಕ್ಕೆ ತಟ್ಟುತ್ತದೆ ಎಂದರು.
ಸ್ಮಾರ್ಟ್ ಕ್ಲಾಸ್ ಉದ್ಘಾಟನೆ: ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೆಯ್ಯದ್ ಜುನೈದ್ ಜಿಫ್ರಿ ತಂಙಳ್ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.
ಜಿಲ್ಲಾ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಅಕ್ರಂ ಅಲಿ ತಂಙಳ್ ಕರಾವಳಿ, ಸೆಯ್ಯದ್ ಪೂಕುಂಞ್ ತಂಙಳ್, ಮದ್ರಸ ತಪಾಸಣಾಧಿಕಾರಿಗಳಾದ ಖಾಸಿಂ ಮುಸ್ಲಿಯಾರ್, ಉಮರ್ ದಾರಿಮಿ ಸಾಲ್ಮರ, ಜೆ.ಪಿ. ಮುಹಮ್ಮದ್ ದಾರಿಮಿ, ರಿಯಾಝ್ ರಹ್ಮಾನಿ, ಅತೂರು ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಅಸ್ನವಿ, ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹೈದರ್ ಕಲಾಯಿ, ಕಾರ್ಯದರ್ಶಿ ಗಫಾರ್ ಹಾಜಿ, ಮದ್ರಸ ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಅಝೀಜ್ ಕಿಡ್ಸ್, ಅಯ್ಯೂಬ್ ಹಾಜಿ, ಫಲೂಲುದ್ದೀನ್ ಹೇಂತಾರ್ ಇದ್ದರು.
ಆಧುನಿಕ ಬೋಧನಾ ರೀತಿ, ಅಧ್ಯಾಪಕರ ಜವಾಬ್ದಾರಿ, ಸಮಸ್ತ ಶೈಕ್ಷಣಿಕ ಕ್ರಾಂತಿ, ಚಟುವಟಿಕೆಗಳ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.