ADVERTISEMENT

‘ಮಂಗಳವಾರ ಅಮಂಗಳವಲ್ಲ’: ದಯಾನಂದ ಕತ್ತಲ್‌ಸಾರ್

ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 13:29 IST
Last Updated 1 ಫೆಬ್ರುವರಿ 2020, 13:29 IST
ಮಂಗಳೂರಿನ ತುಳುಭವನದಲ್ಲಿ ಶನಿವಾರ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹಾಗೂ ಗಣ್ಯರು  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಮಂಗಳೂರಿನ ತುಳುಭವನದಲ್ಲಿ ಶನಿವಾರ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹಾಗೂ ಗಣ್ಯರು  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು   

ಮಂಗಳೂರು: ‘ಮಂಗಳವಾರ ಅಮಂಗಳ ಎಂಬ ಕಲ್ಪನೆಯು ತಪ್ಪಾಗಿದ್ದು, ಅದು ಮಂಗಳಮಯ ದಿನವಾದ ಕಾರಣವೇ ಸವಿತಾ ಸಮಾಜದವರು ರಜೆ ಮಾಡುತ್ತಿದ್ದರು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ನಗರದ ತುಳುಭವನದಲ್ಲಿ ಶನಿವಾರ ಹಮ್ಮಿಕೊಂಡ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.

‘ಕ್ಷೌರಿಕರು ಮಂಗಳವಾರ ಶುಭಕಾರ್ಯಕ್ರಮಗಳ ವಿಧಿವಿಧಾನಗಳಿಗೆ ಹೋಗುತ್ತಿದ್ದರು. ಅವರು ಪೌರೋಹಿತ್ಯವನ್ನೂ ಮಾಡುತ್ತಿದ್ದರು. ಹೀಗಾಗಿ, ಅಂದು ಸಾರ್ವಜನಿಕ ಕ್ಷೌರಕ್ಕೆ ರಜೆ ನೀಡುತ್ತಿದ್ದರು. ಈ ಬಗ್ಗೆ ತುಳು ಪಾಡ್ದನ, ಸಂಧಿ, ನುಡಿಗಟ್ಟುಗಳಲ್ಲಿ ಉಲ್ಲೇಖವಿದೆ’ ಎಂದು ಅವರು ವಿವರಿಸಿದರು.

ADVERTISEMENT

‘ಆದರೆ, ಅವರು ರಜೆ ಹಾಕುವ ದಿನವನ್ನು ‘ಅಮಂಗಳ’ ಎಂದು ಬಿಂಬಿಸಿ, ವಿವಿಧ ಮೌಢ್ಯಗಳನ್ನು ಹೇರಿ ಸಮುದಾಯಗಳನ್ನು ವಿಭಜಿಸುವುದು ಆಧುನಿಕ ಬೆಳವಣಿಗೆಗಳಾಗಿವೆ. ನೆಲದ ತುಳುವ ಸಂಸ್ಕೃತಿಯು ಎಲ್ಲರೂ ಒಂದುಗೂಡುವ ಸಮಾನತೆಯನ್ನು ಸಾರಿತ್ತು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ‘ ಜಾತಿ, ಮತ, ಭೇದಗಳನ್ನು ಮರೆತು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ ಈ ಮಹಾನ್ ಸಂತರನ್ನು ಗೌರವಿಸುವುದು ನಮ್ಮ ಕರ್ತವ್ಯ’ ಎಂದರು.

ನಿವೃತ್ತ ಅಧ್ಯಾಪಕ ವಿಶ್ವನಾಥ ಪಿ. ಕಾಟಿಪಳ್ಳ ಮಾತನಾಡಿ, ‘12ನೇ ಶತಮಾನದ ಶರಣ ಪ್ರಮುಖರಲ್ಲಿ ಮಾಚೀದೇವರು ಒಬ್ಬರಾಗಿದ್ದು, ಅಸ್ಪೃಶ್ಯತೆ, ದುರ್ಬಲರ ಮೇಲಿನ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಇಂದು ವಚನಗಳು ಉಳಿಯಲು ಮಾಚಿದೇವರು ಕಾರಣರಾಗಿದ್ದಾರೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಮಡಿವಾಳರ ಸಂಘದ ಕಾರ್ಯದರ್ಶಿ ಭಾಸ್ಕರ ಬೇಕಲ, ತಹಶೀಲ್ದಾರ್ ಗುರುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಇದ್ದರು.

ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಕಾಳಿಂಗ ಮರ್ದನ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.