ADVERTISEMENT

ನವೀಕೃತ ಮಹಾವೀರ ವೃತ್ತ ಲೋಕಾರ್ಪಣೆ

ಜಿಲ್ಲೆಗೆ ಬರುವ ಜನರಿಗೆ ಶುಭಹಾರೈಸುವ, ಸ್ವಾಗತ, ಶುಭವಿದಾಯ ಕೋರುವ ಕಳಶ: ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:29 IST
Last Updated 25 ಜನವರಿ 2026, 6:29 IST
ನವೀಕೃತ ಮಹಾವೀರ ವೃತ್ತವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೆಂದ್ರ ಹೆಗ್ಗಡೆ ಲೋಕಾರ್ಪಣೆ ಮಾಡಿದರು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ್ ಕಾಮತ್, ಐವನ್ ಡಿಸೋಜ, ಎಸ್‌ಸಿಡಿಸಿಸಿ ಅಧ್ಯಕ್ಷ ರಾಜೇಂದ್ರ ಕುಮಾರ್, ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್ ಮುಂತಾದವರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ
ನವೀಕೃತ ಮಹಾವೀರ ವೃತ್ತವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೆಂದ್ರ ಹೆಗ್ಗಡೆ ಲೋಕಾರ್ಪಣೆ ಮಾಡಿದರು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಶಾಸಕರಾದ ವೇದವ್ಯಾಸ್ ಕಾಮತ್, ಐವನ್ ಡಿಸೋಜ, ಎಸ್‌ಸಿಡಿಸಿಸಿ ಅಧ್ಯಕ್ಷ ರಾಜೇಂದ್ರ ಕುಮಾರ್, ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್ ಮುಂತಾದವರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಮಂಗಳೂರು: ವಿವಿಧ ಕಡೆಗಳಿಂದ ಜಿಲ್ಲೆಗೆ ಬರುವ ಜನರು ಮತ್ತು ವಾಹನಗಳಿಗೆ ಶುಭ ಹಾರೈಸುವ ಉದ್ದೇಶದಿಂದ ನಗರದ ಹೃದಯಭಾಗದಲ್ಲಿ ಮಹಾವೀರ ವೃತ್ತದಲ್ಲಿ ಕಳಶವನ್ನು ನಿರ್ಮಾಣ ಮಾಡಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಂಗಳೂರು ಜೈನ್‌ ಸೊಸೈಟಿ ಮುಂದಾಳತ್ವದಲ್ಲಿ ನಿರ್ಮಾಣವಾದ ನವೀಕೃತ ಮಹಾವೀರ ವೃತ್ತವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

2002ರಲ್ಲಿ ಸರ್ಕಾರದ ವತಿಯಿಂದ ಮಹಾವೀರ ಜಯಂತಿ ಆಚರಣೆ ಜಾರಿಗೆ ಬಂತು. ಆ ಸಂದರ್ಭದಲ್ಲಿ ಇಲ್ಲಿಯೂ ಜೈನ ತೀರ್ಥಂಕರ ಮಹಾವೀರ ಸ್ವಾಮಿಯ ನೆನಪಿಗಾಗಿ ಶಾಶ್ವತ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಯಿತು. ಮೂರ್ತಿ ನಿರ್ಮಿಸಿದರೆ ಸಂಘರ್ಷ ಉಂಟಾಗಬಹುದು ಎಂಬ ಆಲೋಚನೆಯಿಂದ ಕಳಶವನ್ನು ನಿರ್ಮಿಸಲಾಯಿತು ಎಂದು ತಿಳಿಸಿದರು. 

ADVERTISEMENT

ಕಳಶವು ಶುಭದ ಸಂಕೇತ. ಮಂಗಳಕಾರ್ಯಗಳಲ್ಲಿ ಕಳಶ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಇಲ್ಲಿ ಸ್ಥಾಪಿಸಲಾಗಿರುವ ಕಳಶ ಇಲ್ಲಿಗೆ ಬರುವ ಜನರಿಗೆ ಕೆಲಸ ಕಾರ್ಯಗಳಿಗೆ ಶುಭ ಹಾರೈಸುತ್ತದೆ. ಸ್ವಾಗತ ಮತ್ತು ಶುಭವಿದಾಯ ಕೋರುತ್ತದೆ ಎಂದರು.

ಮಹಾವೀರ ವೃತ್ತದ ನಾಮಫಲಕ ಅನಾವರಣಗೊಳಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಮಹಾವೀರ ವೃತ್ತದಲ್ಲಿರುವ ಕಳಶವು ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಇಲ್ಲಿನ ಜನರ ಸ್ವಾಭಿಮಾನದ ಪ್ರತೀಕವಾಗಿ ನಿಂತಿದೆ ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಮಂಗಳೂರು 2.0, ಹೊಸ ಮಂಗಳೂರಿನ ನಿರ್ಮಾಣದಲ್ಲಿ ನವೀಕೃತ ಕಳಶವು ಮುನ್ನುಡಿ ಬರೆಯಲಿ. ನನ್ನ ಪರಿಕಲ್ಪನೆಯ ‘ಬ್ಯಾಕ್‌ ಟು ಊರು’ ಯೋಜನೆಗೆ ಅನುಗುಣವಾಗಿ ದೇಶ– ವಿದೇಶದಲ್ಲಿರುವ ತುಳುನಾಡಿನ ಜನರು ತಾಯ್ನಾಡಿಗೆ ಬಂದು ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಾಗಲಿ ಎಂದು ಹೇಳಿದರು. 

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪಾಲಿಕೆ ಮಾಜಿ ಸದಸ್ಯ ಸಂದೀಪ್ ಗರೋಡಿ, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಭಾಗವಹಿಸಿದ್ದರು. ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಟರಾಜ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮನೋಜ್ ವಾಮಂಜೂರು ನಿರೂಪಿಸಿದರು. ಸಚಿನ್ ಕುಮಾರ್ ಜೈನ್ ವಂದಿಸಿದರು. ವೃತ್ತ ನಿರ್ಮಾಣ ಮಾಡುವಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.

ಕಳಶವು 22 ಟನ್ ತೂಕವಿದ್ದು, 30 ಅಡಿ ಎತ್ತರಿವಿದೆ. 

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.