ADVERTISEMENT

ಮಳಲಿ ಮಸೀದಿ ಸತ್ಯಾಸತ್ಯತೆ ಪರಿಶೀಲಿಸಲು ಅಷ್ಟಮಂಗಲ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 19:00 IST
Last Updated 16 ಮೇ 2022, 19:00 IST
ಮಳಲಿ ಮಸೀದಿ
ಮಳಲಿ ಮಸೀದಿ   

ಮಂಗಳೂರು: ತಾಲ್ಲೂಕಿನ ಮಳಲಿಯ ಮಸೀದಿಯಲ್ಲಿ ದೇವಾಲಯದ ಮಾದರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸತ್ಯಾಸತ್ಯತೆ ಪರೀಕ್ಷಿಸಲು ವಿಶ್ವ ಹಿಂದೂ ಪರಿಷತ್‌ ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ಮುಂದಾಗಿದೆ.

ಗಂಜಿಮಠದ ಮಳಲಿಯ ದರ್ಗಾದಲ್ಲಿ ಇತ್ತೀಚೆಗೆ ದೇವಸ್ಥಾನ ಮಾದರಿಯ ಕಟ್ಟಡ ಪತ್ತೆಯಾಗಿತ್ತು. ವಿಶ್ವ ಹಿಂದೂ ಪರಿಷತ್ ಕೇರಳದ ಪುದುವಾಳರನ್ನು ಕರೆಸಲಿದ್ದು, ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಗೆ ಚಿಂತನೆ ನಡೆಸಿದೆ. ಮಸೀದಿ ಜಾಗದಲ್ಲಿ ದೇವಾಲಯ ಇತ್ತು ಎಂಬುದು ಹಿಂದೂ ಸಂಘಟನೆಗಳ ವಾದವಾಗಿದ್ದು, ಅಷ್ಟಮಂಗಲ ಪ್ರಶ್ನೆ ಮೂಲಕ ಇದರ ರಹಸ್ಯ ಪತ್ತೆ ಮಾಡುವ ಉದ್ದೇಶವಿದೆ. ಧಾರ್ಮಿಕ ಸಾಕ್ಷ್ಯ ಪತ್ತೆ ಬಳಿಕ ಐತಿಹಾಸಿಕ ಪುರಾವೆಗಳನ್ನು ಸಂಗ್ರಹಿಸಲು ಯೋಜನೆ ರೂಪಿಸಿದ್ದು, ಅಷ್ಟಮಂಗಲ ಪ್ರಶ್ನೆ ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಅಷ್ಟಮಂಗಲ ಪ್ರಶ್ನೆ ಜ್ಯೋತಿಷ್ಯದಲ್ಲಿ ನಿಗೂಢ ಶಾಸ್ತ್ರವಾಗಿದ್ದು, ದೀರ್ಘ ಕಾಲದ ಸಮಸ್ಯೆಗಳಿಗೆ, ದೇವಳ ವಿಷಯಗಳಿಗೆ, ಗುಪ್ತ ವಿಚಾರ ತಿಳಿಯುವುದಕ್ಕೆ ಮಾತ್ರ ಇದನ್ನು ಬಳಸಲಾಗುತ್ತದೆ. ಇದೀಗ ಮಸೀದಿ ರಹಸ್ಯದ ಪತ್ತೆಗೆ ಹಿಂದೂ ಸಂಘಟನೆಗಳು ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲು ಮುಂದಾಗಿದೆ. ಮಸೀದಿ ಇರುವ ಜಾಗದ ಸಮೀಪದ ಯಾವುದಾದರೊಂದು ಜಾಗದಲ್ಲಿ ಪ್ರಶ್ನೆಯಿಟ್ಟು, ಆ ಜಾಗದ ಸ್ಥಳ ಪುರಾಣ, ಧಾರ್ಮಿಕ ಇತಿಹಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ ಎಂದು ಹೇಳಲಾಗುತ್ತಿದೆ.

ADVERTISEMENT

ಮುಂದಿನ ವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಳಲಿ ಮಸೀದಿಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯಲಿದೆ. ಸದ್ಯ ನವೀಕರಣ ಕಾಮಗಾರಿಗೆ ನಗರದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.