ಮಂಗಳೂರು: ಗಣೇಶೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕ್ರೈಸ್ತ ಧರ್ಮದವರ ತಂಡ ಶನಿವಾರ ಸಂಘನಿಕೇತನಕ್ಕೆ ತೆರಳಿತು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸ್ಥಾಪಕ ಮತ್ತು ಸಂಚಾಲಕ ಫ್ರ್ಯಾಂಕ್ಲಿನ್ ಮೊಂತೇರೊ ಅವರ ನೇತೃತ್ವದಲ್ಲಿ ಹಲವು ಮುಖಂಡರು ಇದರಲ್ಲಿ ಪಾಲ್ಗೊಂಡರು.
ವೈದ್ಯರು, ಉದ್ಯಮಿಗಳು, ವಕೀಲರು ಮತ್ತು ಗುತ್ತಿಗೆದಾರರನ್ನು ಒಳಗೊಂಡ ತಂಡದವರು ಸಂಘ ನಿಕೇತನಕ್ಕೆ ತೆರಳಿ ಹೂ ಹಾಗೂ ಹಣ್ಣುಗಳನ್ನು ಅರ್ಪಿಸಿ ಸಂಘಟಕರಿಗೆ ಶುಭಾಶಯ ಕೋರಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ತಂಡವನ್ನು ಹೃತ್ಪೂರ್ವಕವಾಗಿ ಬರಮಾಡಿಕೊಂಡರು. ರಾಷ್ಟ್ರೀಯವಾದಿ ಸಿದ್ಧಾಂತ ಮತ್ತು ಸಾಮಾಜಿಕ ಸೌಹಾರ್ದದ ಕುರಿತು ಆರ್‌ಎಸ್‌ಎಸ್ ಮುಖಂಡರ ಜೊತೆ ಸಂವಾದವೂ ನಡೆಯಿತು.
ಇಂಥ ಕಾರ್ಯಕ್ರಮವನ್ನು ಒಂದು ದಶಕದಿಂದ ಮಾಡುತ್ತಿರುವುದಾಗಿ ತಿಳಿಸಿದ ಫ್ರ್ಯಾಂಕ್ಲಿನ್ ಮೊಂತೆರೊ, ಭಿನ್ನ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಒಗ್ಗೂಡಿಸುವುದೇ ಕಾರ್ಯಕ್ರಮದ ಉದ್ದೇಶ ಎಂದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಸತೀಶ್ ಪ್ರಭು, ಮುಖಂಡರಾದ ಪಿ.ಎಸ್.ಪ್ರಕಾಶ್, ಸುರೇಶ್, ಪ್ರವೀಣ್ ಕುಮಾರ್, ಗಜಾನನ ಪೈ, ವಿನೋದ್ ಶೆಣೈ, ಅಭಿಷೇಕ್ ಭಂಡಾರಿ, ಯೋಗೀಶ್ ಆಚಾರ್ಯ ಪಾಲ್ಗೊಂಡಿದ್ದರು. ಭರತನಾಟ್ಯ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಅವರನ್ನು ಗೌರವಿಸಲಾಯಿತು.
ಡಾ.ಜೆಸ್ಸಿ ಮರಿಯಾ ಡಿಸೋಜ, ಡಾ.ಎಲ್ವಿಸ್ ರಾಡ್ರಿಗಸ್, ಡಾ.ತೆರೆಸಾ ಮೆಂಡೋನ್ಸ, ರೇಷ್ಮಾ ಡಿಸೋಜ, ವಿನೋದ್ ಪಿಂಟೊ, ಪ್ರವೀನ್ ತಾವ್ರೊ, ಮ್ಯಾಕ್ಸಿಮ್ ಪಿರೇರ, ನವೀನ್ ಫರ್ನಾಂಡಿಸ್, ಅರುಣ್ ರಾಡ್ರಿಗಸ್ ಮತ್ತು ಪ್ರೊ.ಸಂಧ್ಯಾ ಡಿಸೋಜ ಕ್ರೈಸ್ತರ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.