ADVERTISEMENT

ಬಜ್ಪೆ ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ

ಆಡಳಿತಾತ್ಮಕ ಪ್ರಕ್ರಿಯೆ ಆರಂಭ: ಪರಿಶೀಲನೆ ಆರಂಭಿಸಿದ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 15:47 IST
Last Updated 30 ಅಕ್ಟೋಬರ್ 2019, 15:47 IST
ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ   

ಮಂಗಳೂರು: ಇಲ್ಲಿನ ಬಜ್ಪೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು 50 ವರ್ಷಗಳ ಅವಧಿಗೆ ಗುಜರಾತ ಮೂಲದ ಉದ್ಯಮಿ ಗೌತಮ್‌ ಅದಾನಿ ಒಡೆತನದ ‘ಅದಾನಿ ಗ್ರೂಪ್‌’ಗೆ ಗುತ್ತಿಗೆ ನೀಡಿದ್ದು, ಕಂಪನಿಯ ಅಧಿಕಾರಿಗಳು ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸಿದ್ದಾರೆ. ಅದಾನಿ ಕಂಪನಿ ಪೂರ್ಣ ಪ್ರಮಾಣದಲ್ಲಿ ವಿಮಾನ ನಿಲ್ದಾಣದ ಹೊಣೆ ವಹಿಸಿಕೊಳ್ಳಲು ಕನಿಷ್ಠ ಒಂದು ವರ್ಷ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಾರ್ವಜನಿಕ- ಖಾಸಗಿ ಪಾಲುದಾರಿಕೆ ನಿರ್ಧಾರಣಾ ಸಮಿತಿ (ಪಿಪಿಪಿಎಸಿ) ಮೂಲಕ ಸಾರ್ವಜನಿಕ- ಖಾಸಗಿ ಪಾಲುದಾರಿಕೆ ಅಡಿಯಲ್ಲಿ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ದೇಶದ ಅಹ್ಮದಾಬಾದ್, ಜೈಪುರ, ಲಖನೌ, ಗುವಾಹಟಿ, ತಿರುವನಂತಪುರ ಮತ್ತು ಮಂಗಳೂರು ಸೇರಿ ಆರು ವಿಮಾನ ನಿಲ್ದಾಣಗಳ ತಾತ್ವಿಕ ಗುತ್ತಿಗೆಗೆ ಕೇಂದ್ರ ಸರ್ಕಾರ ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿರ್ವಹಿಸುತ್ತಿರುವ ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗಿ ಪಾಲುದಾರಿಕೆಯಡಿ ನಿರ್ವಹಣೆಗೆ ಕೇಂದ್ರ ಸರ್ಕಾರವು ಅದಾನಿ ಗ್ರೂಪ್‌ಗೆ ಗುತ್ತಿಗೆ ನೀಡಿದೆ. ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಹಾಗೂ ಟರ್ಮಿನಲ್‌ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅದಾನಿ ಕಂಪನಿ ಕೈಗೊಳ್ಳಲಿದೆ.

ADVERTISEMENT

ಗುತ್ತಿಗೆ ಘೋಷಣೆ ಬಳಿಕ ಸರ್ಕಾರ- ಅದಾನಿ ಸಂಸ್ಥೆಯ ಮಧ್ಯೆ ಆಡಳಿತಾತ್ಮಕ ಪ್ರಕ್ರಿಯೆ ಆರಂಭವಾಗಿದೆ. ನಿಲ್ದಾಣದ ಆಸ್ತಿಗಳ ಪರಿಶೀಲನೆ, ಸಿಬ್ಬಂದಿಯ ಕಾರ್ಯ, ಆದಾಯದ ಮೂಲ, ಏರ್‌ಲೈನ್‌ ಸಂಸ್ಥೆ, ಭದ್ರತಾ ವ್ಯವಸ್ಥೆ ಸೇರಿದಂತೆ ಒಟ್ಟು ವಿಚಾರಗಳ ಬಗ್ಗೆ ಅದಾನಿ ಸಂಸ್ಥೆಯ ಪ್ರಮುಖರು ಪರಿಶೀಲನೆ ಆರಂಭಿಸಿದ್ದಾರೆ.

ಈ ಮಧ್ಯೆ ನಿಲ್ದಾಣ ಖಾಸಗೀಕರಣ ಹಿನ್ನೆಲೆಯಲ್ಲಿ ಕೆಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದು, ‘ಈಗಿರುವ ಉದ್ಯೋಗಿಗಳಿಗೆ ವಿಶೇಷ ಆದ್ಯತೆ ನೀಡುವುದಲ್ಲದೇ, ಸ್ಥಳೀಯರಿಗೆ ನೋವಾಗದಂತೆ ನಡೆದುಕೊಳ್ಳುತ್ತೇವೆ’ ಎಂದು ಅದಾನಿ ಸಂಸ್ಥೆ ತಿಳಿಸಿದೆ.

ಅದಾನಿ ಕಂಪನಿಯು ದೇಶದ 6 ವಿಮಾನ ನಿಲ್ದಾಣಗಳನ್ನು ಗುತ್ತಿಗೆಗೆ ಪಡೆದಿದ್ದು, ನಿಲ್ದಾಣಗಳ ವ್ಯವಹಾರ ಉಸ್ತುವಾರಿ ನೋಡಿಕೊಳ್ಳಲು ‘ಅದಾನಿ ಏರ್‌ಪೋರ್ಟ್ಸ್ ಲಿಮಿಟೆಡ್‌’ ಎಂಬ ಸಂಸ್ಥೆ ಕೂಡ ಕಾರ್ಯಾರಂಭ ಮಾಡಲಿದೆ. ಬಳಿಕ ನಿಲ್ದಾಣದ ಹೆಸರಿನಲ್ಲಿಯೂ ‘ಅದಾನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂಬ ಹೆಸರು ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.