ADVERTISEMENT

ಮಂಗಳೂರಿನಲ್ಲಿ ಕ್ಯಾಬಿನೆಟ್ | CM, DCM ಸಕಾರಾತ್ಮಕ ಸ್ಪಂದನೆ: ಸ್ಪೀಕರ್ ಖಾದರ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:17 IST
Last Updated 29 ಆಗಸ್ಟ್ 2025, 4:17 IST
ಯು.ಟಿ.ಖಾದರ್ 
ಯು.ಟಿ.ಖಾದರ್    

ಮಂಗಳೂರು: ಮಂಗಳೂರಿನಲ್ಲಿ ಸಚಿವ ಸಂಪುಟದ ಸಭೆ ನಡೆಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎದುರು ಬೇಡಿಕೆ ಇಡಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ‌

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ₹200 ಕೋಟಿ ವೆಚ್ಚದಲ್ಲಿ ಕೋಟೆಪುರದಲ್ಲಿ ಬೋಳಾರದವರೆಗೆ 1.5 ಕಿ.ಮೀ ಉದ್ದದ ದ್ವಿಪಥ ಸೇತುವೆ ನಿರ್ಮಿಸಲಾಗುವುದು. ನಬಾರ್ಡ್‌ನ ತಾಂತ್ರಿಕ ಅನುಮೋದನೆಗೆ ಕಾಯಲಾಗುತ್ತಿದೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ₹33 ಕೋಟಿ ವೆಚ್ಚದಲ್ಲಿ ಮೂರು ವೀಕ್ಷಣಾ ಡೆಕ್‌ಗಳನ್ನು ನಿರ್ಮಿಸಲಾಗುವುದು ಎಂದು ಖಾದರ್ ಹೇಳಿದರು.

ಭಾನುವಾರದಂದು ಸಂಜೆ 4ರಿಂದ 8 ಗಂಟೆಯವರೆಗೆ ಸೇತುವೆಯ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಿ, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಈ ಸೇತುವೆ ನಿರ್ಮಾಣವಾದರೆ, ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಸೇತು ಆಗಲಿದೆ. ಸ್ಯಾನ್‌ಫ್ರಾನ್ಸಿಸ್ಕೊಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸೇತುವೆಯೊಂದನ್ನು ನೋಡಿದಾಗ ಇಂತಹ ಯೋಚನೆ ಹೊಳೆಯಿತು ಎಂದು ವಿವರಿಸಿದರು. 

ADVERTISEMENT

ಜಿಲ್ಲೆಯ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ ಬಗ್ಗೆ ಮೂರು ಸಭೆ ನಡೆಸಲಾಗಿದೆ. ಜನರು ಪರವಾನಗಿ ಪಡೆಯಲು ತೊಂದರೆ ಅನುಭವಿಸಬಾರದು. 45 ದಿನಗಳಲ್ಲಿ ಪರವಾನಗಿ ದೊರೆಯವಂತೆ ಆಗಲು ನಿಯಮದಲ್ಲಿ ಮಾರ್ಪಾಡು ಅಗತ್ಯವಿದ್ದು, ಸೆ.4ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.

‌ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಭದ್ರತಾ ವ್ಯವಸ್ಥೆಗೆ ₹60 ಕೋಟಿ ಯೋಜನೆ ರೂಪಿಸಲಾಗಿದೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಹೇಳಿದರು.

‘ಪ್ರಬುದ್ಧತೆ ಅನುಷ್ಠಾನ ಮುಖ್ಯ’

ಎಲ್ಲಕ್ಕೂ ಕಾಯ್ದೆ ನಿಯಮ ಇರುತ್ತದೆ. ಆದರೆ ಆಯಾ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಆ ಸ್ಥಾನದಲ್ಲಿ ಕುಳಿತವರು ಪ್ರಬುದ್ಧತೆಯಿಂದ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಧ್ವನಿವರ್ಧಕ ಬಳಕೆಗೆ ಸಮಯಮಿತಿ ವಿಧಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪೀಕರ್ ಯು.ಟಿ.ಖಾದರ್ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.