ADVERTISEMENT

ಮಂಗಳೂರು: ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥದಲ್ಲಿ ಕಂಪ್ಯೂಟರೀಕೃತ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:19 IST
Last Updated 8 ಸೆಪ್ಟೆಂಬರ್ 2025, 6:19 IST
ಮುಡಿಪು ಸಮೀಪದ ಕಂಬಳಪದವಿನ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥ 
ಮುಡಿಪು ಸಮೀಪದ ಕಂಬಳಪದವಿನ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥ    

ಮಂಗಳೂರು: ವಾಹನ ಚಾಲನೆ ಪರವಾನಗಿ ಪಡೆಯುವುದು ಇನ್ನು ಅಷ್ಟು ಸುಲಭವಲ್ಲ, ನಿರ್ದಿಷ್ಟ ಪಥದಲ್ಲಿ ಪರಿಣಿತಿಯಿಂದ ವಾಹನ ಚಲಾಯಿಸಿ, ಕಂಪ್ಯೂಟರ್‌ ಪರೀಕ್ಷೆಯಲ್ಲಿ ಪಾಸಾದರಷ್ಟೆ ಚಾಲನಾ ಪರವಾನಗಿ ಸಿಗುತ್ತದೆ. ಇಂತಹ ಅತ್ಯಾಧುನಿಕ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥವು ಸೆಪ್ಟೆಂಬರ್ 1ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಿದೆ.

ಈವರೆಗೆ ವಾಮಂಜೂರಿನಲ್ಲಿ ನಡೆಯುತ್ತಿದ್ದ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯ ವಾಹನ ಚಾಲನಾ ಪರೀಕ್ಷೆಯು ಮುಡಿಪು ಸಮೀಪ ಕಂಬಳಪದವಿನಲ್ಲಿ ₹7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊಸ ಕೇಂದ್ರಕ್ಕೆ ಆ.18ರಂದು ಸ್ಥಳಾಂತರಗೊಂಡಿದೆ. ಪ್ರಸ್ತುತ ಇಲ್ಲಿ ವಾಮಂಜೂರು ಮಾದರಿಯಲ್ಲಿ ಆರ್‌ಟಿಒ ಇನ್‌ಸ್ಪೆಕ್ಟರ್ ಪರಿವೀಕ್ಷಣೆಯಲ್ಲಿ (ಮಾನ್ಯುವಲ್) ಪರೀಕ್ಷೆ ನಡೆಯುತ್ತಿದೆ. ಕಂಪ್ಯೂಟರೀಕೃತ ವ್ಯವಸ್ಥೆ ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ.

ಮಾನ್ಯವಲ್ ಮಾದರಿಯಲ್ಲಿ ಎಂಟರ ಅಂಕೆ ಮಾದರಿಯಲ್ಲಿ ಪರೀಕ್ಷಾರ್ಥಿಗಳು ವಾಹನ ಚಲಾಯಿಸಿದರೆ, ಆರ್‌ಟಿಒ ಇನ್‌ಸ್ಪೆಕ್ಟರ್‌ಗಳು ಅದನ್ನು ಪರಿಶೀಲಿಸಿ, ಸರಿಯಾಗಿ ಚಾಲನೆ ಮಾಡಿದ್ದಲ್ಲಿ ಉತ್ತೀರ್ಣಗೊಳಿಸುತ್ತಿದ್ದರು. ಕಂಪ್ಯೂಟರೀಕೃತ ಮಾದರಿಯಲ್ಲಿ ಎಲ್ಲವನ್ನೂ ಕಂಪ್ಯೂಟರ್ ಗಮನಿಸಿ ಸಂದೇಶ ಕಳುಹಿಸುತ್ತದೆ. ಚಾಲನಾ ಪಥದ ಎರಡೂ ಬದಿಗಳಲ್ಲಿ 50ಕ್ಕೂ ಹೆಚ್ಚು ಸೆನ್ಸರ್‌ ಪೋಲ್‌ಗಳು ಇರುತ್ತವೆ. ಇವೆಲ್ಲವೂ ಹಸಿರು ಲೈಟ್ ಹೊಂದಿರುತ್ತವೆ. ವಾಹನ ಚಾಲನೆ ಮಾಡುವವರು ಅದಕ್ಕೆ ತಾಗಿಸಿದರೆ, ಹಸಿರು ಲೈಟ್ ಕೆಂಪು ಬಣ್ಣಕ್ಕೆ ತಿರುಗಿ ಎಚ್ಚರಿಕೆ ನೀಡುತ್ತದೆ ಎನ್ನುತ್ತಾರೆ ಆರ್‌ಟಿಒ ಅಧಿಕಾರಿಗಳು. 

ADVERTISEMENT

ಅರ್ಜಿ ಸಲ್ಲಿಕೆ ಹೇಗೆ?: ಕಲಿಕಾ ಪರವಾನಗಿ (ಎಲ್‌ಎಲ್ಆರ್‌) ಮಾಡಿಸಿ ಒಂದು ತಿಂಗಳಾದ ಮೇಲೆ ಚಾಲನಾ ಪರವಾನಗಿಗೆ (ಡಿಎಲ್‌) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸ್ಲಾಟ್ ಕಾಯ್ದಿರಿಸಬೇಕು. ನಿಗದಿತ ದಿನದಂದು ಚಾಲನಾ ಪರೀಕ್ಷಾ ಕೇಂದಕ್ಕೆ ಹೋಗಿ, ಅಲ್ಲಿನ ಕಂಪ್ಯೂಟರ್‌ನಲ್ಲಿ ಅರ್ಜಿ ಸಲ್ಲಿಸಿದವರ ಭಾವಚಿತ್ರ ಅಚ್ಚಾಗುತ್ತದೆ. ಪರೀಕ್ಷಾ ಟ್ರ್ಯಾಕ್‌ಗೆ ಹೋಗುವ ಪೂರ್ವದಲ್ಲಿ, ಕಂಪ್ಯೂಟರ್‌ನಲ್ಲಿ ದಾಖಲಾಗಿರುವ ಚಿತ್ರ ಮತ್ತು ಪರೀಕ್ಷಾರ್ಥಿಯ ಚಿತ್ರ ಹೋಲಿಕೆಯಾಗುತ್ತದೆ. ಎರಡೂ ಹೊಂದಾಣಿಕೆ ಆದರಷ್ಟೇ ಪರೀಕ್ಷೆಗೆ ಅನುಮತಿ ದೊರೆಯುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಪರೀಕ್ಷಾರ್ಥಿ, ಟ್ರ್ಯಾಕ್‌ನ ಕೊನೆ ತಲುಪಿರಬೇಕು. ಅಲ್ಲಿಯೇ ಫಲಿತಾಂಶ ಪ್ರಕಟಗೊಳ್ಳುತ್ತದೆ. ಉತ್ತೀರ್ಣರಾದವರಿಗೆ ಕೆಲವೇ ದಿನಗಳಲ್ಲಿ ಸ್ಮಾರ್ಟ್‌ ಕಾರ್ಡ್ ಮನೆಗೆ ಬಂದು ತಲುಪುತ್ತದೆ ಎಂದು ಅವರು ವಿವರಿಸಿದರು. 

ದ್ವಿಚಕ್ರ ವಾಹನ ಚಾಲನಾ ಪರವಾನಗಿಗೆ ಬರುವವರು ಎಂಟಕ್ಕಿಂತ ಹೆಚ್ಚು ಬಾರಿ ಪೋಲ್ ಅನ್ನು ಮುಟ್ಟಿದ್ದರೆ, ಅಂತಹವರು ಅನುತ್ತೀರ್ಣಗೊಳ್ಳುತ್ತಾರೆ. ಒಮ್ಮೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಏಳು ದಿನಗಳ ನಂತರ ಪುನಃ ₹300 ಶುಲ್ಕ ಪಾವತಿಸಿ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಬಹುದು. ಉತ್ತೀರ್ಣರಾಗುವ ತನಕ ಇದೇ ರೀತಿ ಪುನರಾವರ್ತನೆಯಾಗುತ್ತದೆ. ಕಾರು ಚಾಲನಾ ಪರವಾನಗಿಗೆ ಟ್ರ್ಯಾಕ್‌ನಲ್ಲಿ ಚಲಾಯಿಸುವ ಜೊತೆಗೆ, ‘S’ ಸಿಂಬಲ್ ಮಾದರಿಯಲ್ಲಿ ಕಾರನ್ನು ಹಿಮ್ಮುಖವಾಗಿ ಚಲಾಯಿಸಬೇಕು. ನಿಗದಿತ ಜಾಗದಲ್ಲಿ ಪೋಲ್‌ಗಳನ್ನು ಸ್ಪರ್ಶಿಸದೆ ಕಾರನ್ನು ಪಾರ್ಕ್‌ ಮಾಡಬೇಕು. ಇಂತಹ ಅನೇಕ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತವೆ ಎಂದು ತಿಳಿಸಿದರು.

ಕಂಪ್ಯೂಟರೀಕೃತ ಪರೀಕ್ಷಾ ಕೇಂದ್ರದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಚಾಲನೆಯಲ್ಲಿ ಪರಿಪೂರ್ಣತೆ ಬರಬೇಕು. ವಾಹನ ಚಾಲನೆ ಸರಿಯಾಗಿ ಕಲಿತಾಗ ಅಪಘಾತಗಳ ಪ್ರಮಾಣ ಇಳಿಕೆಯಾಗುತ್ತದೆ. ಶ್ರೀಧರ ಮಲ್ಲಾಡ್ ಹಿರಿಯ ಆರ್‌ಟಿಒ

‘200 ಜನರ ಪರೀಕ್ಷಾ ಸಾಮರ್ಥ್ಯ’ ಕ್ಯಾಸ್‌ಕೇಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಚಾಲನಾ ಪಥದ ನಿರ್ವಹಣೆಯ ಗುತ್ತಿಗೆ ಪಡೆದಿದೆ. ಕಂಪನಿಯ 17 ಸಿಬ್ಬಂದಿ ಜೊತೆಗೆ ಆರ್‌ಟಿಒ ಕಚೇರಿಯ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಇರುತ್ತಾರೆ. ಪ್ರಸ್ತುತ ದಿನಕ್ಕೆ 100 ಜನರ ಚಾಲನಾ ಪರೀಕ್ಷೆ ನಡೆಯುತ್ತಿದೆ. ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ 200 ಜನರಿಗೆ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಕೇಂದ್ರ ಹೊಂದಿದೆ. ಘನ ವಾಹನ ಚಾಲನಾ ಪರವಾನಗಿಗೆ ಬರುವವರಿಗೆ ಒಂದು ದಿನದ ತರಬೇತಿ ನೀಡಲಾಗುತ್ತದೆ. ಇದನ್ನು ಕೆಎಸ್‌ಆರ್‌ಟಿಸಿ ನಿರ್ವಹಣೆ ಮಾಡುತ್ತದೆ. ಒಟ್ಟು 10 ಎಕರೆ ಜಾಗದಲ್ಲಿ ನಾಲ್ಕು ಎಕರೆಯಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ ಮಲ್ಲಾಡ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ಇನ್ನು ಕ್ಯಾಂಪ್ ನಡೆಯದು’ ಮಾನ್ಯುವಲ್ ಮಾದರಿ ಇದ್ದಾಗ ಮೂಲ್ಕಿಯಲ್ಲಿ ಪ್ರತಿ ಶುಕ್ರವಾರ ಮೂಡುಬಿದಿರೆಯಲ್ಲಿ ಬುಧವಾರ ಕ್ಯಾಂಪ್ ನಡೆಯುತ್ತಿತ್ತು. ಇನ್ನು ಈ ರೀತಿಯ ಕ್ಯಾಂಪ್‌ಗಳು ನಡೆಯುವುದಿಲ್ಲ. ಮಂಗಳೂರು ಆರ್‌ಟಿಒ ವ್ಯಾಪ್ತಿಯ ಮೂಲ್ಕಿ ಮೂಡುಬಿದಿರೆ ಉಳ್ಳಾಲ ಮಂಗಳೂರು ನಗರ ವ್ಯಾಪ್ತಿಯವರು ಡಿಎಲ್ ಪರೀಕ್ಷೆಗೆ ಕಂಬಳಪದವಿನ ಕೇಂದ್ರಕ್ಕೆ ಬರಬೇಕಾಗುತ್ತದೆ. ರಾಜ್ಯದಲ್ಲಿರುವ ಏಳು ಇಂತಹ ವಿದ್ಯುನ್ಮಾನ ಚಾಲನಾ ಪರೀಕ್ಷಾ ಕೇಂದ್ರಗಳಲ್ಲಿ ಮಂಗಳೂರಿನ ಕೇಂದ್ರ ಒಂದಾಗಿದೆ. ಕೇಂದ್ರದಲ್ಲಿ ಆಡಳಿತ ಕಚೇರಿ ಜನರಿಗೆ ಕುಳಿತುಕೊಳ್ಳಲು ಆಸನ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.