ADVERTISEMENT

ಮಂಗಳೂರು: ಮಳೆಗೆ ನಲುಗಿದ ಕಡಲ ನಾಡು

ನಗರದ ತಗ್ಗು ಪ್ರದೇಶಗಳ ಜನರು ನಿದ್ದೆಯಿಲ್ಲದೆ ರಾತ್ರಿ ಕಳೆದರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:17 IST
Last Updated 18 ಜುಲೈ 2025, 6:17 IST
ಮಂಗಳೂರಿನ ಮೆರಿಹಿಲ್‌ನಲ್ಲಿ ತಡೆಗೋಡೆ ಕುಸಿದು ವಾಹನಗಳಿಗೆ ಹಾನಿಯಾಗಿರುವುದು : ಪ್ರಜಾವಾಣಿ ಚಿತ್ರ
ಮಂಗಳೂರಿನ ಮೆರಿಹಿಲ್‌ನಲ್ಲಿ ತಡೆಗೋಡೆ ಕುಸಿದು ವಾಹನಗಳಿಗೆ ಹಾನಿಯಾಗಿರುವುದು : ಪ್ರಜಾವಾಣಿ ಚಿತ್ರ   

ಮಂಗಳೂರು: ಬುಧವಾರ ರಾತ್ರಿಯಿಡೀ ಅಬ್ಬರಿಸಿದ ಮಳೆ ನಗರದ ಹಲವಾರು ಪ್ರದೇಶಗಳಲ್ಲಿ ಸಾಕಷ್ಟು ಹಾನಿ ಮಾಡಿದೆ. ತಗ್ಗು ಪ್ರದೇಶಗಳ ಜನರು ನಿದ್ದೆಯಿಲ್ಲದೆ ರಾತ್ರಿ ಕಳೆದರು.

ಕೊಟ್ಟಾರಚೌಕಿ, ಮಾಲೇಮಾರ್‌ನಲ್ಲಿ ಮನೆಗಳಿಗೆ ನೀರು ನುಗ್ಗಿ ಸಾಮಗ್ರಿಗಳು ಹಾಳಾಗಿವೆ, ಮನೆಯೊಳಗೆ ತುಂಬಿದ್ದ ಕೆಸರನ್ನು ಹೊರ ಹಾಕುತ್ತಿದ್ದ ದೃಶ್ಯ ಗುರುವಾರ ಬೆಳಿಗ್ಗೆ ಕಂಡುಬಂತು. ಹಲವಾರು ಅಂಗಡಿಗಳಿಗೆ ನೀರು ನುಗ್ಗಿದ್ದು, ಅಂಗಡಿಕಾರರು ಬೆಳಿಗ್ಗೆ ಸ್ವಚ್ಛಗೊಳಿಸಿದರು.

ಆರ್ಯ ಸಮಾಜ ರಸ್ತೆಯಲ್ಲಿ ಎತ್ತರದಲ್ಲಿರುವ ಮನೆಯೊಂದರ ಕಾಂಪೌಂಡ್ ಕುಸಿದಿದ್ದು, ಕಾಂಪೌಂಡ್ ಜೊತೆಗೆ ಮಣ್ಣು ಜರಿದ ಕಾರಣ ಮನೆ ಅಪಾಯದಲ್ಲಿದೆ. ಮೇರಿಹಿಲ್‌ನಲ್ಲಿ ಕಾಂಪೌಂಡ್ ಕುಸಿದ ಪರಿಣಾಮ ದುರಸ್ತಿಗೆ ತಂದು ನಿಲ್ಲಿಸಿದ್ದ ಹತ್ತಾರು ಬೈಕ್‌ಗಳು ಜಖಂಗೊಂಡಿವೆ. ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಗುಡ್ಡ ಕುಸಿದು, ಕೆಲಹೊತ್ತು ಸಂಚಾರ ವ್ಯತ್ಯಯಗೊಂಡಿತು.

ADVERTISEMENT

ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ.ಭೇಟಿ ನೀಡಿ ಪರಿಶೀಲಿಸಿದರು. ಪಂಪ್‌ವೆಲ್ ವೃತ್ತದಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಗೆ ಸೂಚಿಸಿದರು. ಬಜಪೆ ಸಮೀಪದ ಕೊಂಚಾರು ಎಂಎಸ್‌ಇಝಡ್ ಪ್ರದೇಶದಲ್ಲಿ ಗುಡ್ಡ ಕುಸಿತ ಆಗಿರುವ ಸ್ಥಳಕ್ಕೆ ಭೇಟಿ ನೀಡಿದರು. ಮಳೆಯಿಂದ ತೊಂದರೆಗೊಳಗಾದವರ ಜೊತೆ ಚರ್ಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ ಇದ್ದರು.

ಮಂಗಳೂರಿನ ಆರ್ಯಸಮಾಜ ರಸ್ತೆಯಲ್ಲಿ ಕಾಂಪೌಂಡ್ ಸಹಿತ ಮಣ್ಣು ಕುಸಿದು ಮನೆ ಅಪಾಯದಲ್ಲಿದೆ : ಪ್ರಜಾವಾಣಿ ಚಿತ್ರ
ಆಯಾ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಸ್ತೆ ಹಾನಿ ಆಗಿರುವಲ್ಲಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು.
– ದರ್ಶನ್ ಎಚ್‌.ವಿ., ಜಿಲ್ಲಾಧಿಕಾರಿ

ಮನೆ ಖಾಲಿ ಮಾಡಿ ಮೃತಪಟ್ಟ ವ್ಯಕ್ತಿ

ಉಳ್ಳಾಲ: ಭಾರಿ ಮಳೆಯಿಂದ ಉಳ್ಳಾಲದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಇದೇ ವೇಳೆ ಮಿಲ್ಲತ್‌ನಗರದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದು ಮನೆ ಖಾಲಿ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆಯ ಯಜಮಾನ ಮೃತಪಟ್ಟಿದ್ದಾರೆ.

ಮಿಲ್ಲತ್ ನಗರ ನಿವಾಸಿ ರಫೀಕ್ (55) ಮೃತರು. ಅವರ ಮನೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ಸಾಮಗ್ರಿಗಳನ್ನು ಖಾಲಿ ಮಾಡಿ ಸಂಬಂಧಿಕರ ಮನೆಗೆ ಹೊರಟಿದ್ದರು. ಇದೇ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಅವರಿಗೆ ಪತ್ನಿ ಪುತ್ರ ನಾಲ್ವರು ಪುತ್ರಿಯರು ಇದ್ದಾರೆ.

ಚೆಂಬುಗುಡ್ಡೆಯಲ್ಲಿ ಗುಡ್ಡ ಕುಸಿತ

ಉಳ್ಳಾಲ: ಬುಧವಾರ ರಾತ್ರಿ ಸುರಿದ ಮಳೆಗೆ ಚೆಂಬುಗುಡ್ಡೆಯ ಗುಡ್ಡ ಕುಸಿದಿದೆ. ಹಲವು ಮರಗಳು ಉರುಳಿದ್ದು ಮಣ್ಣು ಕುಸಿಯುತ್ತಲೇ ಇದೆ. ಅಪಾಯವನ್ನು ಅರಿತ ಸ್ಥಳೀಯ ಪ್ರಮುಖರು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವರದಿ ಸಂಗ್ರಹಿಸಿದ್ದು ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ. ಮಳೆ ಕಡಿಮೆಯಾದರೂ ಮಣ್ಣು ಕುಸಿಯುತ್ತಲೇ ಇರುವ ಕಾರಣ ಉಳ್ಳಾಲ ನಗರಸಭೆ ಸದಸ್ಯ ಬಾಝಿಲ್ ಡಿಸೋಜ ಅವರು ಎಂ

ಜಿನಿಯರ್ ಜೊತೆ ಮಾತುಕತೆ ನಡೆಸಿದರು.ಮುಂಜಾಗ್ರತಾ ಕ್ರಮವಾಗಿ  ಸಂಚಾರಿ ಠಾಣೆಗೆ ಏಕಮುಖ  ಸಂಚಾರಕ್ಕೆ ಸಲಹೆ ನೀಡಲಾಯಿತು. ಸಂಚಾರಿ ಠಾಣೆ ಪೊಲೀಸರ ಸಮ್ಮುಖದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಆಪ್ತ ಸಹಾಯಕ ಪ್ರಕಾಶ್ ಪಿಂಟೊ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸಫ್ವಾನ್ ಕೆರೆಬೈಲ್ ಸ್ಥಳೀಯರಾದ ತಂಝೀಲ್ ಇರ್ಫಾನ್ ತೌಸಿಫ್ ಮತ್ತಿತರರು ಗೋಣಿಚೀಲ ಹಾಗೂ ಬ್ಯಾರಿಕೇಡ್‌ಗಳನ್ನು ಇಟ್ಟು ಗುಡ್ಡ ಕುಸಿತವಾದ ರಸ್ತೆಯ ಭಾಗವನ್ನು ಬಂದ್ ಮಾಡಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.