ADVERTISEMENT

ಹರೇಕಳ ಗ್ರಾಮ ಪಂಚಾಯಿತಿ ಕಟ್ಟಡದ ಗೋಡೆಗಳಲ್ಲಿ ಹಾಜಬ್ಬ ಚಿತ್ರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:07 IST
Last Updated 15 ನವೆಂಬರ್ 2022, 5:07 IST
   

ಉಳ್ಳಾಲ: ಹರೇಕಳ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಪಂಚಾಯಿತಿಯ ನೂತನ ಕಟ್ಟಡದ ಗೋಡೆಗಳಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಚಿತ್ರವನ್ನು ರಚಿಸುವ ಮೂಲಕ ಅಕ್ಷರ ಸಂತನಿಗೆ ಗೌರವ ಸಲ್ಲಿಸಲಾಗಿದೆ.

ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರ ವಿಶೇಷ ಅನುದಾನ ಹಾಗೂ ವಿವಿಧ ಅನುದಾನಗಳನ್ನು ಬಳಸಿ ಹರೇಕಳ ಗ್ರಾಮದ ಬಾವಲಿಗುರಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಕಾಮಗಾರಿ ಈಗ ಚುರುಕು ಪಡೆದುಕೊಂಡಿದೆ. ಶೀಘ್ರದಲ್ಲೇ ಕಟ್ಟಡವನ್ನು ಉದ್ಘಾಟನೆ ಹಂತಕ್ಕೆ ಮಾಡಲು ಪಂಚಾಯಿತಿ ಸಿದ್ಧತೆ ಮಾಡಿಕೊಂಡಿದೆ. ಕಟ್ಟಡದ ಒಂದು ಅಂತಸ್ತಿನ ಗೋಡೆ ಪೂರ್ತಿ ಹರೇಕಳ ಹಾಜಬ್ಬ ಅವರ ಚಿತ್ರವನ್ನು ರಚಿಸಲಾಗಿದೆ.

ಕಿತ್ತಳೆ ಹಣ್ಣು ಮಾರಿ ತನ್ನೂರಿನಲ್ಲಿ ಶಾಲೆ ಕಟ್ಟಿಸುವ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಲು ನೆರವಾದ ಹಾಜಬ್ಬ ಹರೇಕಳ ಗ್ರಾಮದ ಹೆಸರನ್ನು ಇಡೀ ಜಗತ್ತಿಗೆ ಪಸರಿಸಿದ್ದಾರೆ. ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾದ ಅವರಿಂದಾಗಿ ಗ್ರಾಮಕ್ಕೆ ವಿಶೇಷ ಗೌರವ ಬಂದಿದೆ. ಅವರಿಗೆ ಗ್ರಾಮದಿಂದ ಎಷ್ಟು ಗೌರವ ಕೊಟ್ಟರೂ ಸಾಲದು. ಆದ್ದರಿಂದ ಗ್ರಾಮದ ಸರ್ವ ಸದಸ್ಯರ ನಿರ್ಣಯದಂತೆ ಕಟ್ಟಡದಲ್ಲಿ ಹರೇಕಳ ಹಾಜಬ್ಬ ಅವರ ಚಿತ್ರ ರಚಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.