ADVERTISEMENT

ಮಂಗಳೂರು | ಪಾನಿಪುರಿ ಅಂಗಡಿ; ಚೆಸ್‌ ಆಟದ ‘ಗರಡಿ’

ವಿಕ್ರಂ ಕಾಂತಿಕೆರೆ
Published 29 ಡಿಸೆಂಬರ್ 2025, 5:55 IST
Last Updated 29 ಡಿಸೆಂಬರ್ 2025, 5:55 IST
ರಾಮ ಶೇರಿಗಾರ
ರಾಮ ಶೇರಿಗಾರ   

ಮಂಗಳೂರು: ಉಡುಪಿಯ ಮಣಿಪಾಲ ಮುಖ್ಯರಸ್ತೆಯಲ್ಲಿರುವ ಕುಂಜಿಬೆಟ್ಟುವಿನಲ್ಲಿರುವ ರಾಮ ಶೇರಿಗಾರ ಬೈಲೂರು ಅವರ ಪಾನಿಪುರಿ ಅಂಗಡಿಗೆ ಹೊಸಬರು ಯಾರೇ ಬಂದರೂ ‘ನಿಮಗೆ ಚೆಸ್‌ ಬರುತ್ತದಾ?’ ಎಂಬ ಪ್ರಶ್ನೆ ಸಿದ್ಧವಾಗಿರುತ್ತದೆ. ‘ಗೊತ್ತಿದೆ’ ಎಂಬುದು ಉತ್ತರವಾಗಿದ್ದರೆ ಒಂದು ಗೇಮ್ ಆಡೋಣವೇ ಎಂಬ ಕೋರಿಕೆಯೊಂದಿಗೆ ಚೆಸ್ ಬೋರ್ಡ್ ಹೊರಬರುತ್ತದೆ. ‘ಸ್ವಲ್ಪ ಬರುತ್ತದೆ’ ಎಂದರೆ ಸಮಯ ಇದ್ದಾಗ ಬನ್ನಿ, ಕಲಿಸಿಕೊಡುವೆ ಎಂಬ ಭರವಸೆಯ ಮಾತು.

ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದಾಗ ಅಪರಿಚಿತರೊಬ್ಬರು ಕಲಿಸಿದ ಚೆಸ್‌ಗೆ ಮನಸೋತ ರಾಮ ಶೇರಿಗಾರ 20 ವರ್ಷಗಳಿಂದ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಜೊತೆಗೆ ಸದ್ದಿಲ್ಲದೆ ಈ ಕ್ರೀಡೆಯ ಪ್ರಚಾರವನ್ನೂ ಮಾಡುತ್ತಿದ್ದಾರೆ. ರ‍್ಯಾಪಿಡ್ ಚೆಸ್‌ನಲ್ಲಿ ಫಿಡೆ ರೇಟಿಂಗ್ (1439) ಗಳಿಸಿರುವ ಅವರು ಇದೇ ಮೊದಲ ಬಾರಿ ಕ್ಲಾಸಿಕಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. 

ದಕ್ಷಿಣ ಕನ್ನಡ ಚೆಸ್ ಸಂಸ್ಥೆ ಆಯೋಜಿಸಿರುವ ಫಿಡೆ ರೇಟೆಡ್‌ ರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಕಣಕ್ಕೆ ಇಳಿದಿರುವ ಅವರು 6 ಸುತ್ತುಗಳಲ್ಲಿ ಒಂದು ಜಯ ಗಳಿಸಿದ್ದಾರೆ. ಅವರಿಗೆ ಬರೆಯಲು ಬರುವುದಿಲ್ಲ. ಕ್ಲಾಸಿಕಲ್‌ ಟೂರ್ನಿಯಲ್ಲಿ ನೊಟೇಷನ್ ಬರೆಯುವುದು ಅಗತ್ಯ. ಆದ್ದರಿಂದ ರ‍್ಯಾಪಿಡ್ ಮತ್ತು ಬ್ಲಿಡ್ಜ್ ಟೂರ್ನಿಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದರು.

ADVERTISEMENT

‘ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅರ್ಜಿ ಭರ್ತಿ ಮಾಡುವುದು ಕಾಪು ಶ್ರೀ ನಾರಾಯಣ ಗುರು ಚೆಸ್ ಅಕಾಡೆಮಿಯ ಸಾಕ್ಷಾತ್’ ಎಂದು ‘ಪ್ರಜಾವಾಣಿ’ಗೆ  ರಾಮ ತಿಳಿಸಿದರು. 

‘ಅಣ್ಣನ ಮಗನೊಂದಿಗೆ ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದೆ. ಆಗ ಅಲ್ಲಿಗೆ ಬಂದ ಯಾರೋ ಒಬ್ಬರು ಚೆಸ್ ಆಡಲು ಕಲಿಸಿದರು. ಆಡುತ್ತ ಆಡುತ್ತ ಆಸಕ್ತಿ ಮೂಡಿತು. ಹೋಟೆಲ್ ಉದ್ಯಮ ನಿಲ್ಲಿಸಿ ಯಶವಂತಪುರದಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದೆ. 20 ವರ್ಷಗಳ ಹಿಂದೆ ಊರಿಗೆ ಮರಳಿ ಮಣಿಪಾಲ ರಸ್ತೆಯಲ್ಲಿ ಅಂಗಡಿ ಮಾಡಿದೆ. ಅಲ್ಲಿ ಕಾಪು ಪೊಲೀಸ್ ಠಾಣೆಯ ಹರೀಶ್ ಬಾಬು ಅವರ ಪರಿಚಯವಾಯಿತು. ಅವರು ಉತ್ತಮ ಚೆಸ್ ಪಟು. ನನ್ನ ಆಸಕ್ತಿ ತಿಳಿದು ಟೂರ್ನಿಗಳಿಗೆ ಕರೆದುಕೊಂಡು ಹೋದರು. ಮಂಗಳೂರು, ಬೆಂಗಳೂರು, ಕುಂದಾಪುರ, ಕಾಪು, ನಿಟ್ಟೆ, ಕೇರಳ ಮುಂತಾದ ಕಡೆಗಳಲ್ಲಿ 100ರಷ್ಟು ಟೂರ್ನಿ ಆಡಿದ್ದೇನೆ’ ಎಂದು ವಿವರಿಸಿದರು.

ರ‍್ಯಾಪಿಡ್‌ ಮತ್ತು ಬ್ಲಿಡ್ಜ್‌ ಟೂರ್ನಿಗಳು ಇದ್ದಾಗ ಒಂದೆರಡು ದಿನ ಪಾನಿಪುರಿ ಅಂಗಡಿಗೆ ಬೀಗ. ಕ್ಲಾಸಿಕಲ್ ಟೂರ್ನಿಗಳು ಕನಿಷ್ಠ 5 ದಿನ ನಡೆಯುತ್ತವೆ. ವೈಯಕ್ತಿವಾಗಿ ಮೊದಲ ಕ್ಲಾಸಿಕಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಈಗ ಅಷ್ಟೂ ದಿನ ವ್ಯವಹಾರ ಇಲ್ಲ.

‘ವ್ಯಾಪಾರದಲ್ಲಿ ನಷ್ಟ ಆಗಲಿದೆ. ಆದರೆ ಚೆಸ್ ಆಟದ ಗಮ್ಮತ್ತು ನಷ್ಟದ ಕಷ್ಟವನ್ನು ಮರೆಸುತ್ತಿದೆ. ಆಟಕ್ಕಾಗಿ ಇದೊಂದು ಸಣ್ಣ ತ್ಯಾಗ’ ಎಂದು ಹೇಳಿದ 71ರ ಹರಯದ ರಾಮ ಮುಂದಿನ ತಿಂಗಳು ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಆಡಲು ಕಾತರರಾಗಿದ್ದಾರೆ.

ಮಣಿಪಾಲ ಮುಖ್ಯರಸ್ತೆಯ ಕುಂಜಿಬೆಟ್ಟುವಿನಲ್ಲಿ ರಾಮ ಅವರ ಸ್ಟಾಲ್ ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿ ಕಲಿಸಿದ ಚೆಸ್‌ ರ‍್ಯಾಪಿಡ್‌ನಲ್ಲಿ 1439 ಫಿಡೆ ರೇಟಿಂಗ್ ಹೊಂದಿರುವ ರಾಮ

ಸಮಯದಲ್ಲಿ ವಿಶೇಷ ಹೊಂದಾಣಿಕೆ
ರಾಮ ಶೇರಿಗಾರ ಅವರಿಗೆ ನೊಟೇಷನ್ ಮಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಡಿಕೆಸಿಎ ಆಯೋಜಿಸಿರುವ ಟೂರ್ನಿಯ ಪ್ರತಿ ಪಂದ್ಯದಲ್ಲೂ 10 ನಿಮಿಷ ಕಡಿಮೆ ಅವಧಿಯನ್ನು ನೀಡಲಾಗಿದೆ.  ‘ಇಬ್ಬರೂ ಆಟಗಾರರು ಒಪ್ಪಿ ಡ್ರಾ ಮಾಡಿಕೊಂಡರೆ ಸಮಸ್ಯೆ ಇಲ್ಲ. ಎದುರಾಳಿ ನಿಯಮ ಉಲ್ಲಂಘನೆ ಮಾಡಿದ್ದಾಗಿ ಸಂದೇಹ ಬಂದರೆ ಆಟಗಾರರು ಸವಾಲು ಹಾಕುತ್ತಾರೆ. ಆಗ ಪರಿಶೀಲನಗೆ ನೊಟೇಷನ್ ಅಗತ್ಯವಿರುತ್ತದೆ. ಕ್ಲಾಸಿಕಲ್‌ ಟೂರ್ನಿಯಲ್ಲಿ ರಾಮ ಶೇರಿಗಾರ ಅವರ ಎದುರಾಳಿಗೆ ಸಂದೇಹ ಇದ್ದರೆ ಸವಾಲು ಹಾಕುವ ಅವಕಾಶವಿಲ್ಲ. ಅದನ್ನು ಪ್ರತಿ ಸುತ್ತಿನ ಎದುರಾಳಿಗೂ ತಿಳಿಸಲಾಗುತ್ತಿದೆ’ ಎಂದು ಟೂರ್ನಿಯ ಮುಖ್ಯ ಆರ್ಬಿಟರ್ ಸಾಕ್ಷಾತ್ ಯು.ಕೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.