ADVERTISEMENT

ಪಂಪ್‌ವಲ್ ಮೇಲ್ಸೇತುವೆ: 2 ವರ್ಷ 2 ತಿಂಗಳಲ್ಲಿ ಕಾಮಗಾರಿ ಪೂರ್ಣ

ವಿಳಂಬಕ್ಕೆ ಕಾಂಗ್ರೆಸ್‌ ಕಾರಣ: ಸಂಸದ ನಳಿನ್‌ಕುಮಾರ್ ನೇರ ಆರೋಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 19:30 IST
Last Updated 31 ಜನವರಿ 2020, 19:30 IST
ಶುಕ್ರವಾರ ಉದ್ಘಾಟನೆಗೊಂಡ ಪಂಪ್‌ವೆಲ್‌ ಫ್ಲೈಓವರ್‌ನಲ್ಲಿ ವಾಹನಗಳ ಸಂಚಾರ ಆರಂಭವಾಯಿತು. ಪ್ರಜಾವಾಣಿ ಚಿತ್ರ
ಶುಕ್ರವಾರ ಉದ್ಘಾಟನೆಗೊಂಡ ಪಂಪ್‌ವೆಲ್‌ ಫ್ಲೈಓವರ್‌ನಲ್ಲಿ ವಾಹನಗಳ ಸಂಚಾರ ಆರಂಭವಾಯಿತು. ಪ್ರಜಾವಾಣಿ ಚಿತ್ರ   

ಮಂಗಳೂರು: ‘ಪಂಪ್‌ವಲ್ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ 10 ವರ್ಷ ಆಗಿಲ್ಲ. ನನ್ನ ಬಳಿ ದಾಖಲೆ ಇದೆ. 2016ರಲ್ಲಿ ಮಹಾವೀರ ವೃತ್ತದಲ್ಲಿದ್ದ ಕಳಸವನ್ನು ತೆರವುಗೊಳಿಸಲಾಗಿದ್ದು, 2017ರಲ್ಲಿ ಕಾಮಗಾರಿ ಆರಂಭಗೊಂಡಿದೆ. ಇದೀಗ 2 ವರ್ಷ ಎರಡು ತಿಂಗಳಲ್ಲಿ ಕಾಮಗಾರಿ ಮುಗಿದಿದೆ’ ಎಂದು ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ನಗರದ ಪಂಪ್‌ವೆಲ್ ಮೇಲ್ಸೇತುವೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಗುತ್ತಿಗೆ ಪಡೆದಿರುವ ನವಯುಗ್‌ ಕಂಪನಿಯು ಕೇಂದ್ರ ಸರ್ಕಾರಕ್ಕೆ ನೀಡಿರುವ ವರದಿಯಂತೆ 2020ರ ಜುಲೈನಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಆದರೆ ಈ ಗಡುವಿಗಿಂತ ಆರು ತಿಂಗಳು ಮುಂಚಿತವಾಗಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ ಎಂದರು.

‘ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಲು ಕಾಂಗ್ರೆಸ್‌ ಕಾರಣ. 2009ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ನಿಯಮಗಳೇ ಮೇಲ್ಸೇತುವೆ ಕಾಮಗಾರಿ ನಿಧಾನಕ್ಕೆ ಪ್ರಮುಖ ಕಾರಣ. ಜತೆಗೆ ಆಗಿನ ಮಹಾನಗರ ಪಾಲಿಕೆ ಆಡಳಿತ, ಆಗಿನ ಶಾಸಕರು ಹಾಗೂ ಉಸ್ತುವಾರಿ ಸಚಿವರೂ ಇದಕ್ಕೆ ಅಷ್ಟೇ ಹೊಣೆ. ಇದು ಟೀಕೆಗೆ ಉತ್ತರವಲ್ಲ. ಆದರೆ ಇದರಲ್ಲಿ ನನ್ನ ತಪ್ಪಿಲ್ಲ. ಕಾಂಗ್ರೆಸ್ಸಿನದ್ದೇ ತಪ್ಪು’ ಎಂದು ದೂರಿದರು.

ADVERTISEMENT

ಪಂಪ್‌ವೆಲ್ ಸೇತುವೆ ತಡವಾಗಿಯಾದರೂ ವೇಗವಾಗಿ ಕಾಮಗಾರಿ ಮುಗಿದಿದೆ. ಪಂಪ್‌ವೆಲ್ ಸೇತುವೆ ತಡವಾಗಿದ್ದರಿಂದ ಬಡವರಿಗೆ ತೊಂದರೆ ಆಗಿಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ಉಳ್ಳಾಲದಲ್ಲಿ 400 ಮನೆಗಳಿಗಾಗಿ ಬಡವರು ಕಾಯುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್‌ನವರು ಪಾದಯಾತ್ರೆ ಯಾವಾಗ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರತಿಪಕ್ಷಗಳು ಟೀಕೆ, ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ ವಿಳಂಬವೆಂದು ಸಂಸದರನ್ನು ದೂರುವವರು, ಕಾಮಗಾರಿ ಪೂರ್ಣವಾದಾಗ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿರುವುದು ಹಾಸ್ಯಾಸ್ಪದ. ಅನ್ನಭಾಗ್ಯವನ್ನು ತಂದಿದ್ದು ಸಿದ್ದರಾಮಯ್ಯ ಎಂದು ಹೇಳುವ ಬದಲು ಕಾಂಗ್ರೆಸ್‌ನವರು ಮುಖ್ಯ ಕಾರ್ಯದರ್ಶಿ ಎಂದು ಹೇಳಬೇಕಲ್ಲವೇ ಎಂದು ತಿರುಗೇಟು ನೀಡಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘ಯಾರದ್ದೋ ತಪ್ಪಿಗೆ ಯಾರೋ ತೊಂದರೆ ಅನುಭವಿಸುವ ಪರಿಸ್ಥಿತಿಯನ್ನು ಸಂಸದರು ವಿವರಿಸಿದ್ದಾರೆ. ಶಾಸಕನಾಗಿ ನಾನೂ ಅದನ್ನು ಅನುಭವಿಸುತ್ತಿದ್ದೇನೆ. ಡೀಮ್ಡ್ ಫಾರೆಸ್ಟ್ ಜಾಗದಲ್ಲಿ 900 ಮಂದಿಗೆ ಮನೆ ಕಟ್ಟುವುದಾಗಿ ಹೇಳಿ, ಹಕ್ಕು ಪತ್ರ ನೀಡಿ ಇದೀಗ ಕಾನೂನು ಸಮಸ್ಯೆ ಎದುರಾಗಿರುವುದರಿಂದ ಜನರು ನನ್ನಲ್ಲಿ ಪ್ರಶ್ನಿಸುವಂತಾಗಿದೆ’ ಎಂದು ಹೇಳಿದರು.

ಶಾಸಕ ಡಾ. ಭರತ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುದರ್ಶನ್, ಮಾಜಿ ಶಾಸಕ ಯೋಗೀಶ್‌ ಭಟ್‌, ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಕಿಶೋರ್ ರೈ, ಸಂದೀಪ್ ಗರೋಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶು ಮೋಹನ್‌ ಇದ್ದರು.

‘400 ಮನೆಗಳ ಸತ್ಯಶೋಧನೆ ಆಗಲಿ’
ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದಿದ್ದರೆ, ಟೀಕೆ ಮಾಡುವವರು ಇಂದಿನ ಕಾರ್ಯಕ್ರಮಕ್ಕೆ ಬರಬೇಕಿತ್ತು. ಅದು ಬಿಟ್ಟು ಜನರ ಆಶೀರ್ವಾದ ಇಲ್ಲದಿದ್ದರೂ, ಹಿಂಬಾಗಿಲಿನಿಂದ ಜನಪ್ರತಿನಿಧಿಯಾದವರು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಉಳ್ಳಾಲದಲ್ಲಿ ಬಾಕಿ ಇರುವ 400 ಮನೆಗಳ ಬಗ್ಗೆಯೂ ಸತ್ಯ ಶೋಧನೆ ನಡೆಸಲಿ ಎಂದು ನಳಿನ್‌ಕುಮಾರ್ ಕಟೀಲ್‌ ಸವಾಲು ಹಾಕಿದರು.

‘2016ರ ನವೆಂಬರ್‌ನಲ್ಲಿ ಇಲ್ಲಿದ್ದ ಕಳಸವನ್ನು ತೆರವುಗೊಳಿಸಲು ಪಾಲಿಕೆಯಿಂದ ಒಪ್ಪಿಗೆ ದೊರಕಿತು. ಆಗಿನ ಶಾಸಕರೂ ಇದಕ್ಕೆ ಕಾರಣ. ಅವರಿಗೆ ಅಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಜಾಗ ಹೋಗುತ್ತದೆ ಎಂಬ ಚಿಂತೆ ಇತ್ತು. ಬಳಿಕ ಅಲ್ಲಿ ಇಂಡಿಯಾನಾ ಆಸ್ಪತ್ರೆ, ಮಸೀದಿ ಇದೆ. ಅದಕ್ಕಾಗಿ ಅಂಡರ್‌ಪಾಸ್ ಬೇಕು ಎಂಬ ಕಾರಣಕ್ಕೆ ಮತ್ತಷ್ಟು ಕಾಮಗಾರಿ ವಿಳಂಬವಾಯಿತು. ನಾನು ಅದಕ್ಕೆಲ್ಲಾ ಅವಕಾಶ ನೀಡಿಯೇ ಕಾಮಗಾರಿ ಮುಗಿಸಿದ್ದೇನೆ’ ಎಂದು ಹೇಳಿದರು.

*
ನಾನು ಕಟೀಲು ಕ್ಷೇತ್ರದ ಪರಮ ಭಕ್ತ. ಕ್ಷೇತ್ರದಲ್ಲಿ ಬ್ರಹ್ಮಕಲಶದ ಮರುದಿನವೇ ಇಲ್ಲಿ ಉದ್ಘಾಟನೆಯ ಭಾಗ್ಯ ದೊರಕಿದೆ. ಟೀಕೆ ಮಾಡಿದವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ.
-ನಳಿನ್‌ಕುಮಾರ್ ಕಟೀಲ್‌, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.