ADVERTISEMENT

ಸುರತ್ಕಲ್‌: ಹಸಿರು ಬಣ್ಣಕ್ಕೆ ತಿರುಗಿದ ಕಡಲು

ನೀರಿನಲ್ಲಿ ಸಗಣಿಯಂತಹ ರಾಡಿ; ಮೀನುಗಾರರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 8:38 IST
Last Updated 17 ಸೆಪ್ಟೆಂಬರ್ 2020, 8:38 IST
ಸುರತ್ಕಲ್‌ ಬಳಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು
ಸುರತ್ಕಲ್‌ ಬಳಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು   

ಸುರತ್ಕಲ್: ಸುರತ್ಕಲ್ ಪರಿಸರದ ಕರಾವಳಿಯಲ್ಲಿ ಸಮುದ್ರದ ನೀರಿನ ಬಣ್ಣ ಕೆಲವು ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದೆ. ಸಗಣಿಯಂತಹ ರಾಡಿ ಮೀನುಗಾರರ ಬಲೆಗೆ ಹಿಡಿದುಕೊಳ್ಳುತ್ತಿದ್ದು, ಇದು ದಡದಲ್ಲಿಯೂ ಸಂಗ್ರಹವಾಗಿದೆ.

ಸಮುದ್ರಕ್ಕೆ ಕೈಗಾರಿಕಾ ತ್ಯಾಜ್ಯದ ವಿಸರ್ಜನೆ ಹೆಚ್ಚಾಗಿರುವುದರಿಂದ ನೀರು ಹಸಿರು ಬಣ್ಣಕ್ಕೆ ತಿರುಗಿರಬಹುದೆಂದು ಶಂಕಿಸಲಾಗಿದೆ. ತೀರ ರಕ್ಷಣಾ ಪಡೆ ಸೋಮವಾರ ಈ ಬಗ್ಗೆ ಪರಿಶೀಲನೆ ನಡೆಸಿದೆ. ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದ ನಂತರ ಮೀನುಗಳು ಬಲೆಗೆ ಬೀಳುತ್ತಿಲ್ಲ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಸೆಪ್ಟೆಂಬರ್‌ ಮೊದಲ ವಾರದಿಂದ ಕರಾವಳಿಯಲ್ಲಿ ಮೀನುಗಾರಿಕೆ ಆರಂಭಗೊಂಡಿದೆ. ಈಗ ಈ ಹಸಿರು ತ್ಯಾಜ್ಯದ ಸಮಸ್ಯೆಯಿಂದ ಮೀನು ಲಭಿಸದಂತಾಗಿದೆ. ಬೃಹತ್ ಮಟ್ಟದಲ್ಲಿ ಸಮುದ್ರ ಸೇರುತ್ತಿರುವ ಕೈಗಾರಿಕಾ ಮಾಲಿನ್ಯವೇ ಇದಕ್ಕೆ ಕಾರಣ’ ಎಂದು ಸ್ಥಳೀಯ ಮೀನುಗಾರರು ದೂರಿದರು.

ADVERTISEMENT

‘ಕಳೆದ ವರ್ಷ ಈ ಭಾಗದಲ್ಲಿ ಸಮುದ್ರದ ನೀರಿಗೆ ಡಾಂಬರು ತ್ಯಾಜ್ಯ ಸೇರಿದ್ದರಿಂದ 5 ತಿಂಗಳು ತೀರ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಈ ಬಗ್ಗೆ ತೀರ ರಕ್ಷಣಾ ಪಡೆ ಅಧ್ಯಯನ ನಡೆಸಿ ತಪ್ಪಿತಸ್ಥ ಕಂಪನಿ ವಿರುದ್ಧ ವರದಿ ನೀಡಿದೆ. ಆದರೆ, ಇದುವರೆಗೆ ಮೀನುಗಾರರಿಗೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ’ ಎಂದು ಮೀನುಗಾರರ ಮುಖಂಡರು ಹೇಳಿದರು.

‘ಹಸಿರು ಬಣ್ಣಕ್ಕೆ ತಿರುಗಿರುವ ಕಾರಣದ ಕುರಿತು ಪರಿಶೀಲನೆ ನಡೆಸುತ್ತೇವೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕೀರ್ತಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.