ADVERTISEMENT

ನಿರ್ವಸಿತರು, ಸ್ಥಳೀಯರಿಗೆ ಕೆಲಸ ನೀಡಿ: ಕರಾವಳಿಗರ ಆಗ್ರಹ

ಮಂಗಳೂರು ವಿಶೇಷ ಆರ್ಥಿಕ ವಲಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 1:11 IST
Last Updated 8 ಸೆಪ್ಟೆಂಬರ್ 2020, 1:11 IST
ಲೋಕೇಶ್ ಬೊಳ್ಳಾಜೆ
ಲೋಕೇಶ್ ಬೊಳ್ಳಾಜೆ   

ಸುರತ್ಕಲ್: ಮಂಗಳೂರು ವಿಶೇಷ ಆರ್ಥಿಕ ವಲಯದ ನಿರ್ವಸಿತ ಕುಟುಂಬಗಳು, ಇತ್ತ ಭೂಮಿ ಅತ್ತ ಉದ್ಯೋಗವೂ ಇಲ್ಲದೇ ದಶಕದಿಂದ ಪರದಾಡುವಂತಾಗಿದೆ. ‌ನಿರ್ವಸಿತರು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಆಗ್ರಹ ಮೊಳಗಿದೆ.

ನಿರ್ವಸಿತ ಕುಟುಂಬದ ಸುಮಾರು 200ಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಮೊರೆ ಇಟ್ಟಿದ್ದು, ಜನಪ್ರತಿನಿಧಿಗಳು, ಎಂಎಸ್‌ಇಝೆಡ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳತ್ತ ಮುಖ ಮಾಡಿ ನಿಂತಿದ್ದಾರೆ.

ಸುಮಾರು 13 ವರ್ಷಗಳ ಹಿಂದೆ ಆರ್ಥಿಕ ಅಭಿವೃದ್ಧಿಗಾಗಿ ಎಂಎಸ್‌ಇಝೆಡ್ ಸ್ಥಾಪನೆಗೆ ಬಜಪೆ, ಪೆರ್ಮುದೆ, ಬಾಳ, ಕಳವಾರು, ಜೋಕಟ್ಟೆ ಮತ್ತಿತರ ಗ್ರಾಮಗಳ ಜನತೆ ತಮ್ಮ ಫಲವತ್ತು ಭೂಮಿಯನ್ನೇ ಕೊಡಬೇಕಾಗಿ ಬಂದಿತ್ತು. ಈಗ ಎಂ.ಆರ್‌.ಪಿ.ಎಲ್., ಒ.ಎಂ.ಪಿ.ಎಲ್, ಎಚ್.ಪಿ.ಸಿ.ಎಲ್, ಐ.ಎಸ್.ಪಿ.ಆರ್.ಎಲ್, ಜೆ.ಬಿ.ಎಫ್‌, ಸಿಂಜಿನ್, ಕಾರ್ಗೊಲೈಟ್, ಸಿಂಥಿಯಾ, ಉಲ್ಕಾ, ಯಶಸ್ವಿನಿ, ಗಾದ್ರಿಯಾ, ಎಒಟಿ, ಬಿ.ಎ.ಎಸ್.ಎಫ್‌ ಮತ್ತಿತರ ಪ್ರತಿಷ್ಠಿತ ಕಂಪನಿಗಳು ಬಂದಿವೆ. ಕಂಪನಿಗಳು ಕರಾವಳಿಯ ಅಭಿವೃದ್ಧಿಗೆ, ರಾಜ್ಯ–ದೇಶದ ಆರ್ಥಿಕ ಚಟುವಟಿಕೆಗೆ ನಿರಂತರ ಉತ್ತೇಜನ ನೀಡುತ್ತಿವೆ.

ADVERTISEMENT

ಆದರೆ, ‘ಎಂಎಸ್‌ಸಿಝಡ್ ಸ್ಥಾಪನೆಗಾಗಿ ಭೂಮಿ ನೀಡುವ ವೇಳೆಯಲ್ಲಿ ನಮಗೆ ಉದ್ಯೋಗದ ಭರವಸೆ ನೀಡಲಾಗಿತ್ತು. ಅಲ್ಲದೇ, ಎಸ್‌ಇಝೆಡ್ ಸ್ಥಾಪನೆಯಿಂದ ಸ್ಥಳೀಯ ಸಹಸ್ರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಮನವೊಲಿಸಿದ್ದರು. ಆದರೆ, ಸ್ಥಾಪನೆಯಾಗಿ ದಶಕ ಕಳೆದರೂ, ನಿರ್ವಸಿತರಿಗೆ ಕೆಲಸ ಸಿಕ್ಕಿಲ್ಲ.
ಇದರಿಂದಾಗಿ ಅತ್ತ ಭೂಮಿಯೂ ಇಲ್ಲ, ಇತ್ತ ಉದ್ಯೋಗವೂ ಇಲ್ಲದೇ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ನಿರ್ವಸಿತರು ದೂರಿಕೊಂಡಿದ್ದಾರೆ.

‘ನಿರ್ವಸಿತ ಕುಟುಂಬಗಳ ಎಲ್ಲರಿಗೂ ಉದ್ಯೋಗ ಸಿಕ್ಕಿಲ್ಲ. ಅಲ್ಲದೇ, ಈ ಹಿಂದೆ ಇಲ್ಲಿನ ಕಂಪನಿಗಳ ಗುತ್ತಿಗೆ ಕೆಲಸವನ್ನು ಸ್ಥಳೀಯರಿಗೆ ನೀಡಲಾಗುತ್ತಿತ್ತು. ಆದರೆ, ಈಗ ಈ ಕೆಲಸಗಳಿಗೂ ಉತ್ತರ ಭಾರತ ಹಾಗೂ ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಇದು ನಿರ್ವಸಿತರು ಮಾತ್ರವಲ್ಲ, ಕರಾವಳಿಯ ಜನತೆಯೇ ನಿರುದ್ಯೋಗ ಸಮಸ್ಯೆಗೆ ತುತ್ತಾಗುವಂತೆ ಮಾಡಿದೆ’ ಎಂದು ಚೆಳೈರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಷ್ಪರಾಜ್ ದೂರುತ್ತಾರೆ.

‘ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಆದ್ಯತೆ ನೀಡಬೇಕು. ಈ ಬಗ್ಗೆ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

‘ಕರಾವಳಿಯ ಜನತೆ ನೆಲ, ನೀರು ಸೇರಿದಂತೆ ಬದುಕನ್ನೇ ಈ ಬೃಹತ್‌ ಕಂಪನಿಗಳ ಸ್ಥಾಪನೆಗಾಗಿ ನೀಡಿದ್ದಾರೆ. ಆದರೆ, ಕಂಪನಿಗಳು ಈಗ ಹೊರರಾಜ್ಯದ ಮಂದಿಗೆ ಕೆಲಸ ನೀಡುತ್ತಿವೆ. ಇದು ಖಂಡನೀಯ’ ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.