ಬೆಂಗಳೂರು: ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ್ (ರುಸಾ–1) ಅಡಿಯಲ್ಲಿ ಲಭಿಸಿದ ₹ 7 ಕೋಟಿ ಮೊತ್ತವನ್ನು ದುರುಪಯೋಗ ಮಾಡಿದ ಆರೋಪಕ್ಕೆ ಸಿಲುಕಿದೆ. ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಿಸಲು ಈ ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು.
ರಾಜ್ಯ ಉನ್ನತ ಶಿಕ್ಷಣ ಸಮಿತಿಯ ತಜ್ಞರ ತಂಡ ನಡೆಸಿದ ಪರಿಶೀಲನೆಯ ಸಂದರ್ಭದಲ್ಲಿ ಹಣ ದುರುಪಯೋಗ ಆಗಿರುವ ವಿಷಯ ಬೆಳಕಿಗೆ ಬಂದಿದೆ. ಕಟ್ಟಡ ನಿರ್ಮಾಣ ಆಗದೇ ಇರುವುದನ್ನು ಕಂಡು ತಂಡದ ಸದಸ್ಯರು ಅವಾಕ್ಕಾಗಿದ್ದರು ಎನ್ನಲಾಗಿದೆ. ಸಂಬಂಧಪಟ್ಟ ದಾಖಲೆಗಳನ್ನು ಕೇಳಿದಾಗ ಅನುದಾನದ ಮೊತ್ತವನ್ನು ಅಂತರರಾಷ್ಟ್ರೀಯ ವಿದ್ಯಾರ್ಥಿನಿಲಯ ನಿರ್ಮಿಸಲು ತೆಗೆದಿರಿಸಲಾಗಿದೆ ಎಂಬ ಉತ್ತರ ಬಂದಿದೆ. ಆದರೆ, ಅನುದಾನ ಬಳಕೆಗೆ ಸಂಬಂಧಿಸಿ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಎರಡು ಹಾಸ್ಟೆಲ್ ನಿರ್ಮಿಸಿದ ಮಾಹಿತಿ ನೀಡಲಾಗಿದೆ!
ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ರಾಜ್ಯ ಯೋಜನಾ ನಿರ್ದೇಶಕರ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು ಅಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ ಇದಕ್ಕೆ ವಿಶ್ವವಿದ್ಯಾನಿಲಯ ನೀಡಿರುವ ಸ್ಪಷ್ಟನೆ ತೃಪ್ತಿಕರವಾಗಿರಲಿಲ್ಲ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ದುರುಪಯೋಗ ಮಾಡಿದ ಅನುದಾನದ ಮೊತ್ತವನ್ನು ವಾಪಸ್ ಪಡೆಯುವಂತೆ ಮತ್ತು ದಂಡ ವಿಧಿಸುವಂತೆ ಉನ್ನತ ಶಿಕ್ಷಣ ಸಮಿತಿ ಶಿಫಾರಸು ಮಾಡಿತ್ತು. ಇಲಾಖೆಯ ಹೊಸ ಕಾರ್ಯದರ್ಶಿ ಈಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ವಿಷಯವನ್ನು ಸದ್ಯದಲ್ಲೇ ಅವರ ಮುಂದೆ ಇರಿಸಲಾಗುವುದು’ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.
ಅನ್ಯ ಕಾರ್ಯಕ್ಕೆ ಬಳಸುವಂತಿಲ್ಲ
ರುಸಾ ಅನುದಾನದಲ್ಲಿ ಶೇಕಡ 60ರಷ್ಟು ಕೇಂದ್ರ ಸರ್ಕಾರದ ಪಾಲು ಇದ್ದು ಉಳಿದ ಶೇಕಡ 40 ರಾಜ್ಯ ಸರ್ಕಾರದ ಪಾಲು. ಇಲಾಖೆಯ ಅಧಿಕಾರಿಗಳ ಅಭಿಪ್ರಾಯದಂತೆ, ರುಸಾ ಅಡಿಯಲ್ಲಿ ಯಾವುದಕ್ಕೆ ಅನುದಾನ ಬಿಡುಗಡೆ ಆಗಿದೆಯೋ ಅದಕ್ಕಲ್ಲದೆ ಅನ್ಯಕಾರ್ಯಗಳಿಗೆ ಬಳಸುವಂತಿಲ್ಲ. ರುಸಾ–1 ಯೋಜನೆ 2013ರಿಂದ 2017ರ ವರೆಗೆ ಜಾರಿಯಲ್ಲಿತ್ತು. ಅವಧಿ ಮುಗಿದ ಕೂಡಲೇ ಅನುದಾನ ಬಳಕೆಗೆ ಸಂಬಂಧಿಸಿ ವರದಿ ಸಲ್ಲಿಸುವಂತೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪುರಷರ ಮತ್ತು ಮಹಿಳೆಯರ ವಿದ್ಯಾರ್ಥಿನಿಲಯಗಳಿಗೆ ತಲಾ ₹ 3.5 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು.
ಉನ್ನತ ಶಿಕ್ಷಣ ಸಮಿತಿಯ ತಜ್ಞರ ತಂಡ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದೆ. ಅದರ ಪ್ರಕಾರ ನೋಟಿಸ್ ಜಾರಿಗೊಳಿಸಲಾಗಿದೆ. ವಿವಿ ನೀಡುವ ತನಿಖಾ ವರದಿ ಕೈಸೇರಿದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
ಆಂತರಿಕ ತನಿಖೆಗೆ ಆದೇಶ
ಅನುದಾನ ಬಳಕೆಗೆ ಸಂಬಂಧಿಸಿ ಆಂತರಿಕ ತನಿಖೆಗೆ ವಿಶ್ವವಿದ್ಯಾನಿಯಲ ಆದೇಶ ಹೊರಡಿಸಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು. ‘ಈಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ತನಿಖೆಗೆ ಆದೇಶ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರ ಭಾಗವಾಗಿ ಹಣಕಾಸು ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ತನಿಖೆ 15 ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.