ADVERTISEMENT

ಕೇಂದ್ರ ತನ್ನ ನಿಲುವು ಸ್ಪಷ್ಟಪಡಿಸಲಿ: ಖಾದರ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:09 IST
Last Updated 14 ಫೆಬ್ರುವರಿ 2020, 9:09 IST
ಯು.ಟಿ. ಖಾದರ್‌
ಯು.ಟಿ. ಖಾದರ್‌   

ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಆಧರಿಸಿ ಬಡ್ತಿ ಮತ್ತು ನೇಮಕಾತಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು. ಇಲ್ಲವೇ ಈ ಜನರ ಹಿತಾಸಕ್ತಿ ಕಾಪಾಡಲು ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.

ಸಂವಿಧಾನವನ್ನು ಬದಲಾಯಿಸುವುದು, ಸಂವಿಧಾನವನ್ನು ಸುಡುವುದು ಇತ್ಯಾದಿಗಳ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಇಂತಹ ಹೇಳಿಕೆಗಳನ್ನು ನೀಡಿದ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಎಲ್‌ಪಿಜಿ ದರ ಹೆಚ್ಚಳ: ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು ಏಕಾಏಕಿ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರ ಮೇಲೆ ಪ್ರಹಾರ ಮಾಡಿದೆ ಎಂದು ದೂರಿದರು.

ದೆಹಲಿ ಚುನಾವಣೆ ಮುಗಿಯುವವರೆಗೆ ಬೆಲೆ ಏರಿಕೆ ಮಾಡದ ಸರ್ಕಾರ, ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬೆಲೆ ಏರಿಕೆ ಮಾಡಿದೆ. ಉದ್ಯೋಗವಿಲ್ಲದೇ ಕಂಗೆಟ್ಟಿರುವ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ ಎಂದರು.

ಸೂಕ್ಷ್ಮ ವಿಷಯಗಳು ಮತ್ತು ಕಾನೂನುಗಳಿಗೆ ಯಾವುದೇ ಅವಕಾಶವಿಲ್ಲ ಎಂಬುದನ್ನು ದೆಹಲಿ ಚುನಾವಣೆ ತೋರಿಸಿದೆ. ದೆಹಲಿ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನಾಯಕರು ಅಭಿವೃದ್ಧಿಯ ಬಗ್ಗೆ ಯಾವುದೇ ಭಾಷಣಗಳು ಮಾಡಲಿಲ್ಲ. ಕೇವಲ 370 ನೇ ವಿಧಿ ರದ್ದು, ರಾಮಮಂದಿರ, ಬಾಬರಿ ಮಸೀದಿ, ಎನ್‌ಆರ್‌ಸಿ ಮತ್ತು ಸಿಎಎ ಬಗ್ಗೆ ಮಾತ್ರ ಮಾತನಾಡಿದ್ದರು. ದೆಹಲಿಯ ಜನತೆ ಇಂತಹ ವಿಷಯಗಳಿಗೆ ಕಿವಿಗೊಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ ಎಂದು ಹೇಳಿದರು.

ಕಠಿಣ ಕ್ರಮ ಕೈಗೊಳ್ಳಿ: ವಿದ್ಯಾರ್ಥಿನಿಯರ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಖಾದರ್, ‘ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ಘಟನೆಗಳು ನಡೆದಾಗ, ಧರ್ಮ ಮತ್ತು ಜಾತಿಯ ಹೊರತಾಗಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮಂಗಳೂರು ಕ್ಷೇತ್ರದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಶಾಸಕರ ನಿಧಿಗೆ ಪೊಲೀಸ್ ಇಲಾಖೆಗೆ ₹25 ಲಕ್ಷ ನೀಡಲು ಸಿದ್ಧ. ಈ ಪ್ರಕರಣದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ವಿದ್ಯಾರ್ಥಿನಿಯರ ಧೈರ್ಯವನ್ನು ಮೆಚ್ಚಲೇಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.