ADVERTISEMENT

ಮಂಗಳೂರು: ಹೆಂಡತಿ ಜೊತೆ ಜಗಳ– ಮ್ಯಾರೇಜ್ ಬ್ರೋಕರ್‌ಗೆ ಇರಿದು ಕೊಂದ ಯುವಕ!

ಮಂಗಳೂರು ನಗರದ ಹೊರವಲಯದ ವಳಚ್ಚಿಲ್‌ನಲ್ಲಿ ಗುರುವಾರ ರಾತ್ರಿ ಘಟನೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 5:40 IST
Last Updated 23 ಮೇ 2025, 5:40 IST
<div class="paragraphs"><p>ಮುಸ್ತಾಫಾ, ಸುಲೇಮಾನ್&nbsp;</p></div>

ಮುಸ್ತಾಫಾ, ಸುಲೇಮಾನ್ 

   

ಮಂಗಳೂರು: ನಗರದ ಹೊರವಲಯದ ವಳಚ್ಚಿಲ್‌ನಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಅವರ ಸಂಬಂಧಿಕನೇ ಚೂರಿಯಿಂದ ಇರಿದಿದ್ದು, ಗಾಯಾಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತ ವ್ಯಕ್ತಿಯ ಇಬ್ಬರು ಪುತ್ರರು ಗಾಯಗೊಂಡಿದ್ದಾರೆ.

ಮೃತರನ್ನು ವಾಮಂಜೂರಿನ ಸುಲೇಮಾನ್ (50) ಎಂದು ಗುರುತಿಸಲಾಗಿದೆ. ಅವರ ಇಬ್ಬರು ಪುತ್ರರಾದ ರಿಯಾಬ್ ಹಾಗೂ ಶಿಯಾಬ್ ಕೂಡ ಗಾಯಗೊಂಡವರು. ಸುಲೇಮಾನ್ ಅವರ ಸಂಬಂಧಿ ವಳಚ್ಚಿಲ್ ನಿವಾಸಿ ಮುಸ್ತಾಫಾ (30) ಕೊಲೆ ಅರೋಪಿ. ಆತನನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ADVERTISEMENT

'ಸುಲೇಮಾನ್ ಮದುವೆ ದಲ್ಲಾಳಿಯಾಗಿ (ಮ್ಯಾರೇಜ್ ಬ್ರೋಕರ್‌) ಕಾರ್ಯನಿರ್ವಹಿಸುತ್ತಿದ್ದರು. ಅವರು ತೋರಿಸಿದ್ದ ಷಾಹಿನಾಜ್ ಎಂಬ ಯುವತಿಯನ್ನು ಮುಸ್ತಾಫಾ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದ. ದಂಪತಿ ನಡುವೆ ಮನಃಸ್ತಾಪ ಉಂಟಾಗಿದ್ದು, ಷಾಹಿನಾಜ್ ಎರಡು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದು, ಬಳಿಕ ಗಂಡನ ಮನೆಗೆ ಮರಳಿರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ಮುಸ್ತಾಫಾ ಸುಲೇಮಾನ್ ಗೆ ಗುರುವಾರ ರಾತ್ರಿ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದ' ಎಂದು ಪೊಲೀಸರು ಹೇಳಿದ್ದಾರೆ.

ಮುರಿದ ಮದುವೆ ಬಗ್ಗೆ ಮಾತುಕತೆ ನಡೆಸಿ ವಿಚಾರ ಬಗೆಹರಿಸಲು ಸುಲೇಮಾನ್ ತಮ್ಮ ಇಬ್ಬರು ಪುತ್ರರ ಜೊತೆ ಮುಸ್ತಾಫಾನ ಮನೆಗೆ ಗುರುವಾರ ರಾತ್ರಿ ತೆರಳಿದ್ದರು. ಮಾತುಕತೆ ಫಲಪ್ರದವಾಗಿರಲಿಲ್ಲ. ಮನೆಯಿಂದ ಹೊರಡುವಂತೆ ಮುಸ್ತಾಫಾ ಅವರಿಗೆ ಸೂಚಿಸಿದ್ದ. ಬಳಿಕ ಏಕಾಏಕಿ ಸಿಟ್ಟಾದ ಆತ ಮನೆಯಲ್ಲಿದ್ದ ಚೂರಿ ತಂದು ಸುಲೆಮಾನ್ ಅವರ ಕುತ್ತಿಗೆಗೆ ಇರಿದಿದ್ದ. ಗಾಯಗೊಂಡ‌ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದರು ಎಂದು ತಿಳಿಸಿದ್ದಾರೆ.

ತಡೆಯಲು ಬಂದ ಶಿಯಾಬ್ ಎದೆಯ ಎಡಭಾಗಕ್ಕೆ ಹಾಗೂ ರಿಯಾಬ್ ಅವರ ಬಲ ತೋಳಿಗೂ ಚೂರಿಯಿಂದ ಹಲ್ಲೆ ಮಾಡಿದ್ದು ಅವರಿಬ್ಬರೂ ಗಾಯಗೊಂಡಿದ್ದರು. ಮೂವರು ಗಾಯಾಳುಗಳನ್ನು ಸ್ಥಳೀಯರು ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನ ಜನಪ್ರಿಯ ಆಸ್ಪತ್ರೆಗೆ ಕರೆದೊಯ್ದಿದ್ದರು‌. ಸುಲೆಮಾನ್ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶಿಯಾಬ್ ಹಾಗೂ ರಿಯಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.