ADVERTISEMENT

ಮಂಗಳೂರು | ಮತಾಂತರ ವಿರೋಧಿ ಮಸೂದೆ ಹಿಂಪಡೆಯಲು ಕೈಸ್ತ್ರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 15:14 IST
Last Updated 20 ನವೆಂಬರ್ 2021, 15:14 IST
ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದವರು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಾಣಿಕ್ಯ ಅವರಿಗೆ ಮನವಿ ಸಲ್ಲಿಸಿದರು.
ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದವರು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಾಣಿಕ್ಯ ಅವರಿಗೆ ಮನವಿ ಸಲ್ಲಿಸಿದರು.   

ಮಂಗಳೂರು: ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಮತಾಂತರ ವಿರೋಧಿ ಮಸೂದೆಯನ್ನು ವಾಪಸ್ ಪಡೆಯಬೇಕು ಮತ್ತು ಸಮೀಕ್ಷೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಶುಕ್ರವಾರ ಇಲ್ಲಿ ಕ್ರೈಸ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಸ್ತಾಪಿತ ಮತಾಂತರ ನಿಷೇಧ ಕಾಯ್ದೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಸಂಘ-ಸಂಸ್ಥೆಗಳ ಗಣತಿಯನ್ನು ಹಿಂತೆಗೆಯುವ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಎಂದು ವಿನಂತಿಸಿದರು.

ಜೆ.ಬಿ ಸಲ್ಡಾನ ಮಾತನಾಡಿ, ‘ರಾಜ್ಯದಲ್ಲಿ ಸರ್ಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಇದನ್ನು ರಾಜ್ಯದ ಕ್ರೈಸ್ತ ಸಮುದಾಯವು ಒಮ್ಮತದಿಂದ ವಿರೋಧಿಸುತ್ತದೆ’ ಎಂದರು.

ADVERTISEMENT

ಬಿಲಿವರ್ಸ್ ಚರ್ಚಿನ ಬಿಷಪ್ ಡೆಮೆಟ್ರಿಯುಸ್ ಹಾಗೂ ಚರ್ಚ್ ಆಫ್ ಸೌತ್ ಇಂಡಿಯಾ ಪರವಾಗಿ ಮಾತನಾಡಿದ ವಿನ್‍ಫ್ರೆಡ್ ಅಮ್ಮಣ್ಣ, ‘ಕ್ರೈಸ್ತರು ಧಾರ್ಮಿಕ ಹಾಗೂ ಸೇವಾ ಕಾರ್ಯಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಿ, ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಬಲವಂತದ ಮತಾಂತರ ನಡೆಯುತ್ತದೆ ಎನ್ನುವುದು ಸುಳ್ಳು ಆರೋಪ’ ಎಂದರು.

ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಸಭೆಯ ಅಧ್ಯಕ್ಷ ಸ್ಟ್ಯಾನಿ ಲೋಬೊ ಮಾತನಾಡಿ, ‘ಕ್ರೈಸ್ತರು ಮತ್ತು ಉಳಿದ ಪಂಗಡದವರು ಒಗ್ಗಟ್ಟು ಮತ್ತು ಅನ್ಯೋನ್ಯವಾಗಿ ಆಚರಣೆಗಳನ್ನು ನಡೆಸುತ್ತಾರೆ. ಸುಳ್ಳು ಆರೋಪಗಳಿಂದ ಸಂಬಂಧಗಳ ನಡುವೆ ಬಿರುಕು ಮೂಡುತ್ತದೆ. ಅಶಾಂತಿ ಮತ್ತು ದ್ವೇಷದ ಭಾವನೆ ಬಿತ್ತಲು ಕಾರಣವಾಗುತ್ತದೆ’ ಎಂದರು.

ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತಲಿನೊ, ಮಾಜಿ ಶಾಸಕ ಜೆ.ಆರ್. ಲೋಬೊ, ಪ್ರಮುಖರಾದ ಅಶ್ವಿನ್ ಕಾರ್ಡೊಜ, ಜೆ.ಬಿ. ಕ್ರಾಸ್ತ, ಜೈಸನ್ ಕ್ರಾಸ್ತ, ಅನಿಲ್ ಐವನ್ ಫರ್ನಾಂಡಿಸ್, ಜೋನ್ ಡಿಸಿಲ್ವ, ಒನಿಲ್ ಡಿಸೋಜ, ಪಾಸ್ಟರ್ ಡೊನಾಲ್ಡ್ ಮಿನೆಜಸ್, ಪಾಸ್ಟರ್ ಐವನ್ ಮೊಂತೆರೊ, ಮ್ಯಾಥ್ಯೂ, ಮಾರಿಯೆಟ್ ಬಿ. ಎಸ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.