ADVERTISEMENT

ಕೋವಿಡ್‌: ಸರ್ಕಾರದ ಸೂಚನೆಗೆ ಸ್ಪಂದಿಸಿ

‘ಮಂಗಳೂರು ದಸರಾ’: ಶಾರದೆಗೆ ಪೂಜೆ ಸಲ್ಲಿಸಿದ ಜನಾರ್ದನ ಪೂಜಾರಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 7:46 IST
Last Updated 25 ಅಕ್ಟೋಬರ್ 2020, 7:46 IST
ಕುದ್ರೋಳಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ಶಾರದಾ ಮಾತೆಗೆ ಜನಾರ್ದನ ಪೂಜಾರಿ ಶನಿವಾರ ಪೂಜೆ ಸಲ್ಲಿಸಿದರು.
ಕುದ್ರೋಳಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ಶಾರದಾ ಮಾತೆಗೆ ಜನಾರ್ದನ ಪೂಜಾರಿ ಶನಿವಾರ ಪೂಜೆ ಸಲ್ಲಿಸಿದರು.   

ಮಂಗಳೂರು: ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ವೈಭವದ ಮಂಗಳೂರು ದಸರಾ ಆಚರಿಸಲಾಗುತ್ತಿದ್ದು, ಶನಿವಾರ ಕ್ಷೇತ್ರದ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿ ದೇವಸ್ಥಾನಕ್ಕೆ ಭೇಟಿ ನೀಡಿ, ಶಾರದಾ ದೇವಿ ಸೇರಿದಂತೆ ನವದುರ್ಗೆಯರಿಗೆ ಪೂಜೆ ಸಲ್ಲಿಸಿದರು.

ಸಂಜೆ ಕ್ಷೇತ್ರಕ್ಕೆ ಬಂದ ಅವರು, ನಾರಾಯಣ ಗುರುಗಳು, ಗಣಪತಿ, ನವದುರ್ಗೆಯರು, ಗೋಕರ್ಣನಾಥನ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕೆಲಹೊತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಈ ಬಾರಿಯ ದಸರಾ ಹಬ್ಬವನ್ನು ಬಹಳ ಕಟ್ಟುನಿಟ್ಟಿನಿಂದ ಆಚರಿಸಲಾಗುತ್ತಿದೆ. ಕೋವಿಡ್‌–19 ತಡೆಗೆ ಸರ್ಕಾರ ಸಾಕಷ್ಟು ಮುಂಜಾಗ್ರತೆ ವಹಿಸುತ್ತಿದೆ. ಅದು ಆಗಲೇಬೇಕು. ಹೀಗಾಗಿ ಪ್ರತಿಯೊಬ್ಬರೂ ಸರ್ಕಾರದ ಸೂಚನೆಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ADVERTISEMENT

‘ಕುದ್ರೋಳಿಯಲ್ಲಿ ನಡೆಯುವ ದಸರಾ ಬಹಳ ದೊಡ್ಡದು. ಇದರ ರೂವಾರಿ ನಾನಲ್ಲ. ಒಳಗೆ ಕುಳಿತಿರುವ ಶಿವ ಇದನ್ನು ನಡೆಸಿಕೊಂಡು ಬರುತ್ತಿದ್ದಾನೆ. ಎಲ್ಲರಿಗೂ ಶಿವ ಆಶೀರ್ವಾದ ಸಿಗಲಿ’ ಎಂದು ಹಾರೈಸಿದರು.

ದಸರಾ ಅಂಗವಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂಸದ ನಳಿನ್‌ಕುಮಾರ್ ಕಟೀಲ್‌ ಮಾತನಾಡಿ, ರಾಜ್ಯದಲ್ಲಿ ದಸರಾ ಹಬ್ಬವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ರಾಜಾಶ್ರಯದಲ್ಲಿ ಅದ್ಧೂರಿಯಾಗಿ ದಸರಾ ಆಚರಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಹಿರಿಯರಾದ ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಸರಾ ಕೂಡ ಪ್ರಖ್ಯಾತವಾಗಿದೆ ಎಂದು ಹೇಳಿದರು.

ಕೋವಿಡ್–19 ಮಾರ್ಗಸೂಚಿಯನ್ನು ಅನುಸರಿಸಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಜನಾರ್ದನ ಪೂಜಾರಿ ಅವರ ಪರಿಕಲ್ಪನೆಯಂತೆ ಸರ್ವರ ದಸರಾ ಆಗಿ ಆಚರಿಸಲಾಗುತ್ತಿದೆ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್‌ ಮಾತನಾಡಿ, ಕೋವಿಡ್–19 ಸಂದರ್ಭದಲ್ಲಿ ಅಚ್ಚುಕಟ್ಟಾಗಿ ದಸರಾ ಆಯೋಜಿಸುವ ಮೂಲಕ ಜನರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಂತಸದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್‌, ಮೇಯರ್‌ ದಿವಾಕರ ಪಾಂಡೇಶ್ವರ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸುದರ್ಶನ ಮೂಡುಬಿದಿರೆ, ವಕ್ತಾರ ರಾಧಾಕೃಷ್ಣ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ಪೂರ್ಣಿಮಾ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್‌ ಆರ್‌. ಇದ್ದರು.

ದಸರಾ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನದಿಂದ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.