ಮಂಗಳೂರು: ರಂಗು ರಂಗಿನ ವಿದ್ಯುದ್ದೀಪಳಿಂದ ಝಗಮಗಿಸುವ ರಸ್ತೆಗಳ ನಡುವೆ ಸಾಗಿಬಂದ ಶಾರದಾ ದೇವಿ, ನವದುರ್ಗೆಯರ ಮೂರ್ತಿಗಳು, ಆಕರ್ಷಕ ಸ್ತಬ್ಧಚಿತ್ರಗಳು, ತಾಸೆ ಪೆಟ್ಟಿನ ಲಯದ ನಡುವೆ ಹುಲಿವೇಷಗಳ ಕುಣಿತದ ಅಬ್ಬರ, ಜಾನಪದ ಕಲಾತಂಡಗಳು ಮಂಗಳೂರು ದಸರಾ ಶೋಭಾಯಾತ್ರೆಯ ಕಳೆ ಹೆಚ್ಚಿಸಿದವು. ದೈವಿಕ ಅನುಭೂತಿ ಹಾಗೂ ನಾಡಿನ ಸಾಂಸ್ಕೃತಿಕ ಶಕ್ತಿಯ ಮಿಳಿತ ಈ ದಸರಾವನ್ನು ಅವಿಸ್ಮರಣೀಯಗೊಳಿಸಿತು.
ಶೋಭಾಯಾತ್ರೆಯಲ್ಲಿ ಗುರುವಾರ ಸಾಗಿಬಂದ ಶಾರದೆಯ ಮೃಣ್ಮಯ ಮೂರ್ತಿಯ ದೈವೀ ಸ್ವರೂಪ, ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ ಮೂರ್ತಿಗಳ ಮನಮೋಹಕ ರೂಪ ಭಕ್ತರ ಮನಸ್ಸನ್ನು ಪುಳಕಗೊಳಿಸಿತು. ನಡುವೆ ಸಾಗಿಬಂದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ಅವರ ಜೀವನ ಸಂದೇಶವನ್ನು ಸಾರಿತು.
ಶಿವಮೊಗ್ಗದ ಕಲಾತಂಡದ ಲಂಬಾಣಿ ಕುಣಿತ, ಢಕ್ಕೆ ಕುಭಿತ, ಬೆಳಗಾವಿಯ ಜೈಭವಾನಿ ತಂಡದ ಮಹಿಳೆಯರ ಕೋಲಾಟ, ಗೋಂದಳಿ ಕುಣಿತ, ವೀರಗಾಸೆ, ರಾಮಾಂಜನೇಯ ತಂಡದ ನಂದಿಧ್ವಜ ಕುಣಿತ, ಸಿದ್ಧಿ ಕುಣಿತ, ಕಂಗೀಲು ಕುಣಿತ, ಡೊಳ್ಳುಕುಣಿತ, ಮಹಿಳಾ ತಂಡದ ಡೊಳ್ಳು ಕುಣಿತ, ಚೆಂಡೆ ವಾದನ, ಕುಣಿತ ಭಜನೆ, ವಾದ್ಯವೃಂದ.. ಮೊದಲಾದ ಕಲಾತಂಡಗಳು ನಾಡಿನ ಸಾಂಸ್ಕೃತಿಕ ವೈವಿಧ್ಯದ ದರ್ಶನ ಮಾಡಿಸಿದವು. ಡೊಳ್ಳುಕುಣಿತ ತಂಡದವರು ಅಲ್ಲಲ್ಲಿ ಮಾನವ ಪಿರಮಿಡ್ ರಚಿಸಿ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ರಂಗಿನ ಕೊಡೆಗಳು ಶೋಭಾಯಾತ್ರೆ ಕಳೆಗಟ್ಟುವಂತೆ ಮಾಡಿದವು.
ಶೋಭಾಯಾತ್ರೆಯಲ್ಲಿ ಕಾಣಿಸಿಕೊಂಡ ವಿಚಿತ್ರ ವೇಷಗಳು ಕಣ್ಮನ ಸೆಳೆದವು. ಕೆಲವರು ಚಿಕಿತ್ಸೆಗೆ ಹಣ ಸಂಗ್ರಹಿಸುವ ಸಲುವಾಗಿ ವಿವಿಧ ವೇಷಗಳನ್ನು ಧರಿಸಿದ್ದರು. ಶೋಭಾಯಾತ್ರೆಯನ್ನು ನೋಡಲು ತಾಸು ಗಟ್ಟಲೆ ಕಾದು ಕುಳಿತವರಿಗೆ ರಸಮಂಜರಿ ಕಾರ್ಯಕ್ರಮಗಳು ಮನರಂಜನೆ ಒದಗಿಸಿದವು. ವಿದ್ಯುದ್ದೀಪಂಲಕೃತ ವಾಹನದಲ್ಲಿ ‘ಮುದ್ದುಶಾರದೆ’ಯ ವೇಷ ಧರಿಸಿ ಸಾಗಿಬಂದ ಪುಟಾಣಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಳು.
ಮೆರವಣಿಗೆ ನೋಡಲು ಬಂದ ಕೆಲವರು ರಸ್ತೆ ಪಕ್ಕದ ಕಟ್ಟಡಗಳ ಮಹಡಿಗಳನ್ನು ಏರಿ ಕುಳಿತಿದ್ದರು. ಪುಟಾಣಿ ಮಕ್ಕಳ ದೊಡ್ಡವರ ಹೆಗಲೇರಿ ಶೋಭಾಯಾತ್ರೆ ವೀಕ್ಷಿಸಿದರು. ಕೆಲವರು ಉಚಿತವಾಗಿ ಪಾನೀಯ ವ್ಯವಸ್ಥೆ ಮಾಡಿದ್ದರು.
ಚಿತ್ತಾಕರ್ಷಕ ಸ್ತಬ್ಧಚಿತ್ರಗಳು
ಈ ಸಲದ ಸ್ತಬ್ಧಚಿತ್ರಗಳೂ ಚಿತ್ತಾಕರ್ಷಕವಾಗಿದ್ದವು. ಪುರಿ ಜಗನ್ನಾಥ ದರ್ಶನ ಸೇನಾ ಪಡೆಯ ಬಲವನ್ನು ಸಾರುವ ಸ್ತಬ್ದಚಿತ್ರಗಳು ವಿಶೇಷವಾಗಿದ್ದವು. ಪುರಾಣದ ಕಥಾನಕಗಳನ್ನು ಸಾರುವ ಸ್ತಬ್ಧಚಿತ್ರಗಳು ಮನರಂಜನೆಯ ಜೊತೆಗೆ ಪುರಾಣದ ಜ್ಞಾನವನ್ನೂ ಒದಗಿಸಿದವು. ಶಾರದೆ ನವದುರ್ಗೆಯರ ಮೂರ್ತಿಗಳು ಸಾಗುವ ದೃಶ್ಯಗಳನ್ನು ಸ್ತಬ್ಧಚಿತ್ರಗಳನ್ನು ಭಕ್ತರು ಕಣ್ತುಂಬಿಕೊಳ್ಳುವುದರ ಜೊತೆಗೆ ಮೊಬೈಲ್‌ನಲ್ಲೂ ಚಿತ್ರೀಕರಿಸಿಕೊಂಡರು.
Cut-off box - ಹುಲಿವೇಷಗಳ ಅಬ್ಬರ ಮಂಗಳೂರು ದಸರಾ ಹುಲಿವೇಷಗಳ ಅಬ್ಬರಕ್ಕೆ ಹೆಸರುವಾಸಿ. ಈ ಸಲವೂ ಹುಲಿವೇಷಗಳ ಟ್ರಕ್‌ಗಳ ಅಬ್ಬರ ಜೋರಾಗಿಯೇ ಇತ್ತು. ಕತ್ತಿನಲ್ಲಿ ನೋಟುಗಳ ಸರಮಾಲೆ ತೊಟ್ಟು ಕಸರತ್ತು ಪ್ರದರ್ಶಿಸಿದ ಹುಲಿವೇಷಧಾರಿಗಳ ಗತ್ತು ಗೈರತ್ತುಗಳಿಗೆ ಪ್ರೇಕ್ಷಕರು ಮಾರುಹೋದರು. ಲಯಬದ್ಧ ತಾಸೆ ಪೆಟ್ಟಿನ ಮಾರ್ದನಿ ರಸ್ತೆ ಇಕ್ಕೆಲಗಳಲ್ಲಿ ನಿಂತವರ ಮೈನವಿರೇಳುವಂತೆ ಮಾಡಿತ್ತು. ಕೆಲವರು ಅದರ ಲಯಕ್ಕೆ ತಾವೂ ಹೆಜ್ಜೆಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.