ADVERTISEMENT

ಮಂಗಳೂರು: ದಕ್ಕಲ ಜಾಂಬವ ಪುರಾಣಕ್ಕೆ ಮನಸೋತ ಪ್ರೇಕ್ಷಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 5:19 IST
Last Updated 20 ಫೆಬ್ರುವರಿ 2023, 5:19 IST
ಮಂಗಳೂರು ಸಾಹಿತ್ಯ ಉತ್ಸವದಲ್ಲಿ ದಕ್ಕಲ ಮುನಿಸ್ವಾಮಿ ಅವರು ಜಾಂಬವ ಪುರಾಣವನ್ನು ಭಾನುವಾರ ಪ್ರಸ್ತುತಪಡಿಸಿದರು– ಪ್ರಜಾವಾಣಿ ಚಿತ್ರ
ಮಂಗಳೂರು ಸಾಹಿತ್ಯ ಉತ್ಸವದಲ್ಲಿ ದಕ್ಕಲ ಮುನಿಸ್ವಾಮಿ ಅವರು ಜಾಂಬವ ಪುರಾಣವನ್ನು ಭಾನುವಾರ ಪ್ರಸ್ತುತಪಡಿಸಿದರು– ಪ್ರಜಾವಾಣಿ ಚಿತ್ರ   

ಮಂಗಳೂರು: ದಕ್ಕಲಿಗರ ಮುನಿಸ್ವಾಮಿ ಅವರು ಕೈಯಲ್ಲಿ ತಂಬೂರಿ ಹಿಡಿದು, ತಮ್ಮ ಕಂಚಿನ ಕಂಠದಿಂದ ಹಾಡು–ಕತೆಗಳ ಮೂಲಕ ಆದಿ ಜಾಂಬವ ಪುರಾಣವನ್ನು ಪ್ರಸ್ತುತಪಡಿಸುತ್ತಿದ್ದರೆ, ಪ್ರೇಕ್ಷಕರು ಮೂಕವಿಸ್ಮಿತರಾಗಿ ಆಲಿಸಿದರು.

ಭೂಮಿಯ ಹುಟ್ಟುವುದಕ್ಕೆ ಆರು ತಿಂಗಳು ಮೊದಲೇ ಜಾಂಬವಂತ ಹುಟ್ಟಿದ ಪುರಾಣ ಕತೆಯನ್ನು ಮುನಿಸ್ವಾಮಿ ಅವರು ಮಂಗಳೂರು ಸಾಹಿತ್ಯ ಉತ್ಸವದಲ್ಲಿ ಕನ್ನಡ– ತೆಲುಗು ಮಿಶ್ರಿತ ಭಾಷೆಯಲ್ಲಿ ಸೊಗಸಾಗಿ ವಿವರಿಸಿದರು.

‘ನಮಗೆ ಸ್ವಂತ ಊರಿಲ್ಲ–ಸೂರಿಲ್ಲ. ಊರೂರು ಅಲೆದು ಆದಿ ಜಾಂಬವ ಪುರಾಣದ ಕತೆಯನ್ನು ಹಾಡುತ್ತೇವೆ. ನಮ್ಮ ಕಂಠದಿಂದ ಹೊರಹೊಮ್ಮುವ ಈ ಕತೆಯನ್ನು ಆಲಿಸಿದರೆ ಶ್ರೇಯಸ್ಸಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅವರು ಕೊಟ್ಟ ಕಾಣಿಕೆ ಸ್ವೀಕರಿಸಿ ನಾವು ಅಲೆದಾಟ ಮುಂದುವರಿಸುತ್ತೇವೆ. ತಲೆ ತಲಾಂತರದಿಂದ ನಾವು ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದೇವೆ’ ಎಂದು ಮುನಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಾನು ಓದು ಬರಹ ಕಲಿತವನಲ್ಲ. ಅಜ್ಜಿ ದೊಡ್ಡ ರಂಗಮ್ಮ ಅವರಿಂದ ಬಾಲ್ಯದಲ್ಲೇ ಈ ಪುರಾಣವನ್ನು ಕಲಿತೆ. ಅವರು ಈಗಿಲ್ಲ. ನೆನಪಿಗಾಗಿ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದೇನೆ’ ಎಂದು ಅಂಗಿಯ ತೋಳು ಏರಿಸಿ ಹಚ್ಚೆಯನ್ನು ತೋರಿಸಿದರು.

‘ಮನೆಮನೆ ಹೋಗಿ ಈ ಪುರಾಣ ಹಾಡಲು ನನ್ನ ಮಗನಿಗೂ ಇಷ್ಟವಿಲ್ಲ. ಹಾಗಾಗಿ ಇದನ್ನು ಕಲಿಯುವ ಆಸಕ್ತಿ ತೋರಿಸಿಲ್ಲ. ನನ್ನ ಜೊತೆ ಈ ಹಾಡು ಕೊನೆಯಾಗುತ್ತದೆ’ ಎಂದು ನೋವು ತೋಡಿಕೊಂಡರು.

ಸಾಹಿತ್ಯ ಉತ್ಸವದ ಕೊನೆಯ ಗೋಷ್ಠಿಯಲ್ಲಿ ಮುನಿಸ್ವಾಮಿ ದಕ್ಕಲ ಜಾಂಬ ಪುರಾಣ ಹೇಳುತ್ತಿದ್ದರೆ ಪ್ರೇಕ್ಷಕರು ಎದ್ದುನಿಂತು ಗೌರವಿಸಿದರು.

ಡಿ.ಎಂ.ಘನಶ್ಯಾಮ ಹಾಗೂ ಸತ್ಯಬೋಧ ಜೋಷಿ ಅವರು ಮುನಿಸ್ವಾಮಿ ಜೊತೆ ಸಂವಾದ ನಡೆಸುವ ಮೂಲಕ ದಕ್ಕಲರ ಬದುಕಿನ ನೈಜ ಚಿತ್ರಣಗಳನ್ನು ಅರ್ಥೈಸಿಕೊಳ್ಳಲು ಪ್ರೇಕ್ಷಕರಿಗೆ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.