ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಕಾರಣ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಮಳೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಭಾನುವಾರ ಆನ್‌ಲೈನ್ ಸಭೆ ನಡೆಸಿದ ನಂತರ ಮಾತನಾಡಿದ ಅವರು ಎನ್‌ಡಿಆರ್‌ಎಫ್ ತಂಡ ಪುತ್ತೂರಿನಲ್ಲಿ ತಂಗಲಿದೆ. ಎಸ್‌ಡಿಆರ್‌ಎಫ್‌ನ 2 ತಂಡಗಳು ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ಇರಲಿವೆ ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಮತ್ತು ಪಿಡಿಒ, ಮೆಸ್ಕಾಂ, ಅರಣ್ಯ ಮತ್ತಿತರ ಇಲಾಖೆಗಳ ಸಿಬ್ಬಂದಿಗೆ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳಿಂದ ಕೆಲವು ಜನವಸತಿ ಪ್ರದೇಶಗಳಲ್ಲಿ ತೊಂದರೆಯಾಗಿರುವ ಬಗ್ಗೆ ದೂರುಗಳು ಬಂದಿದ್ದು ಕೂಡಲೇ ಸ್ಪಂದಿಸಬೇಕು ಎಂದು ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಮಳೆಗಾಲ ಶುರು ಆಗುವ ಮೊದಲೇ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಹಿಂದಿರುಗಿ ಬರುತ್ತಿದ್ದು ಈ ಬೋಟುಗಳು ಎನ್‌ಎಂಪಿಎ ಬಂದರಿಗೆ ಪ್ರವೇಶಿಸಲು ಅನುಮತಿ ನೀಡಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವ್ಯಾಪಕ ನಾಶ ನಷ್ಟ
ಭಾನುವಾರ ಮುಸಲಧಾರೆಯಾಗಿದ್ದು ಜಿಲ್ಲೆಯ ಹಲವೆಡೆ ಅನಾಹುತಗಳು ಸಂಭವಿಸಿವೆ. ಮಂಗಳೂರು ನಗರದ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಸ್ಟೇಟ್‌ಬ್ಯಾಂಕ್ ಸಮೀಪ ಸೇಂಟ್ ಆ್ಯನ್ಸ್ ಶಾಲೆಯ ಹಿಂಭಾಗದ ಆವರಣ ಗೋಡೆ ಕುಸಿದು ಮುಖ್ಯ ರಸ್ತೆಗೆ ಬಿದ್ದಿದೆ. ಕಾವೂರಿನಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದಿದ್ದು ಮೆಸ್ಕಾಂ ಸಿಬ್ಬಂದಿ ಶೀಘ್ರ ದುರಸ್ತಿ ಮಾಡಿಕೊಟ್ಟರು. ತೆಂಕ ಮಿಜಾರಿನಲ್ಲಿ ಹೆದ್ದಾರಿ ಬದಿಯ ಗೋಡೆ ಕುಸಿಉವ ಸಾಧ್ಯತೆ ಇದ್ದು ಸಿಮೆಂಟ್ ಬ್ಲಾಕ್‌ಗಳನ್ನು ಇರಿಸಲಾಗಿದೆ. ಬಂಟ್ವಾಳ ತಾಲ್ಲೂಕಿನ ಕಡೇಶಿವಾಲಯ ಗ್ರಾಮದ ಕಲ್ಲಾಜೆಯಲ್ಲಿ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.