ADVERTISEMENT

ಸೇಂಟ್ ಆಗ್ನೆಸ್‌ನಲ್ಲಿ ಸಹ ಶಿಕ್ಷಣ

ವಿದ್ಯಾರ್ಥಿಗಳಿಗೂ ಪ್ರವೇಶ ಪಡೆಯಲು ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 16:13 IST
Last Updated 19 ಏಪ್ರಿಲ್ 2022, 16:13 IST

ಮಂಗಳೂರು: ನಗರದ ಸೇಂಟ್ ಆಗ್ನೆಸ್ ಕಾಲೇಜಿನ ಪದವಿ ತರಗತಿಗಳಿಗೆ ಈ ವರ್ಷ ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸೇಂಟ್ ಆಗ್ನೆಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ. ಎಂ. ಲಿಡಿಯಾ ಎ.ಸಿ. ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈಗಾಗಲೇ ಸ್ನಾತಕೋತ್ತರ ವಿಭಾಗದಲ್ಲಿ ಸಹ ಶಿಕ್ಷಣ ನೀಡಲಾಗುತ್ತಿದ್ದು, ಅದನ್ನು ಪದವಿಗೂ ವಿಸ್ತರಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ದೊರಕಿದ್ದು, 2022-23ನೇ ಸಾಲಿನಿಂದಲೇ ವಿದ್ಯಾರ್ಥಿಗಳಿಗೂ ಪದವಿ ತರಗತಿಗಳಿಗೆ ಪ್ರವೇಶ ನೀಡಲು ಕಾಲೇಜು ಸಿದ್ಧತೆ ನಡೆಸಿದೆ. ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಂದರ್ಭದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಸೇಂಟ್ ಆಗ್ನೆಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದ್ದು, ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಪರಿಚಯಿಸುವ ಮತ್ತು ನಡೆಸುವ ಸೌಲಭ್ಯವನ್ನೂ ಹೊಂದಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಲು ಪಠ್ಯೇತರ ಚಟುವಟಿಕೆಗಳು, ಪಠ್ಯ ಪೂರಕ ಅಧ್ಯಯನ ಮತ್ತು ಕೌಶಲ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ವೆನಿಸ್ಸಾ, ಆಡಳಿತ ಡೀನ್ ಶುಭರೇಖಾ, ಅಸೋಸಿಯೇಟ್ ಪ್ರೊಫೆಸರ್ ಡಾ. ದೇವಿಪ್ರಭಾ ಆಳ್ವ, ವಿದ್ಯಾರ್ಥಿನಿ ಪ್ರತಿನಿಧಿ ಕೃಪಾ ಮರಿಯಾ ರಸ್ಕಿನಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.