
ಬ್ಯಾರಿ ನಾಟಕ , ತಾಲೀಮು ಪ್ರದರ್ಶನ | ಬ್ಯಾರಿ ಸಮುದಾಯದ ಸಾಧಕರಿಗೆ ಸನ್ಮಾನ
ಮಂಗಳೂರು: ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತುಳು, ಕೊಂಕಣಿಯಂತೆ ಬ್ಯಾರಿ ಭಾಷೆಯ ಐಚ್ಛಿಕ ಪಠ್ಯ ಜಾರಿಯಾಗಬೇಕು. ಉಳ್ಳಾಲ ತಾಲ್ಲೂಕಿನ ಮಂಜನಾಡಿ ಗ್ರಾಮದಲ್ಲಿ ಬ್ಯಾರಿ ಭವನವನ್ನು ತ್ವರಿತವಾಗಿ ನಿರ್ಮಿಸಬೇಕು. ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು...
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಗುರುಪುರ ಕೈಕಂಬದಲ್ಲಿ ಭಾನುವಾರ ಏರ್ಪಡಿಸಿದ್ದ ಮಂಗಳೂರು ತಾಲ್ಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳಿವು.
ಬ್ಯಾರಿ ಶಿಕ್ಷಣ ಸಂಸ್ಥೆಗಳು ಬ್ಯಾರಿ ಕಲೆ ಸಾಹಿತ್ಯ ಸಂಸ್ಕೃತಿ ಕುರಿತ ಅಭಿರುಚಿ ಹುಟ್ಟಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬ್ಯಾರಿ ಸಮುದಾಯದವರು ಮನೆಗಳಲ್ಲಿ ಕಡ್ಡಾಯವಾಗಿ ಬ್ಯಾರಿ ಭಾಷೆಯನ್ನೇ ಮಾತನಾಡಬೇಕು. ಯುವಜನರು ಬ್ಯಾರಿ ಭಾಷೆ, ಇತಿಹಾಸ, ಜನಪದ, ಕಲೆ ಇತ್ಯಾದಿಯ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ನಡೆಸಲು ಮುಂದಾಗಬೇಕು ಎಂಬುದೂ ಸೇರಿ ಏಳು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ‘ತುಳು,ಕನ್ನಡ ಭಾಷೆಯ ಪ್ರಭಾವದ ಹೊರತಾಗಿಯೂ ಬ್ಯಾರಿ ಸಾಹಿತ್ಯ ಮನ್ನಣೆ ಪಡೆಯುತ್ತಿದೆ. ಈ ಭಾಷೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊಣೆ ನಮ್ಮದು. ಸುಮಾರು 1500 ವರ್ಷಗಳ ಇತಿಹಾಸವಿರುವ ಬ್ಯಾರಿ ಭಾಷೆ ಮತ್ತು ಸಮುದಾಯದ ಕುರಿತು ಇನ್ನಷ್ಟು ಕ್ಷೇತ್ರ ಅಧ್ಯಯನಗಳು ನಡೆಯಬೇಕು. ಇದರಿಂದ ಹೊಸ ವಿಚಾರಗಳು ಬೆಳಕಿಗೆ ಬರಲಿವೆ. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಬ್ಯಾರಿ ಭಾಷೆಯ ಕಾರ್ಯಕ್ರಮಗಳು ಪ್ರಸಾರವಾಗಬೇಕು’ ಎಂದರು. ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಂ.ಎಚ್. ಮೊಹಿದಿನ್ ಅಡ್ಡೂರು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟಿಸಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನಿ ಆಲ್ವಾರಿಸ್ ಭಾಗವಹಿಸಿದ್ದರು. ಬ್ಯಾರಿ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಸ್ವಾಗತಿಸಿದರು. ಅಕಾಡಮಿಯ ಸದಸ್ಯ ಯು.ಎಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ: ಬ್ಯಾರಿ ಇನ್ಪೊ ಡಾಟ್ ಕಾಂ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಸಮಾರೋಪ ಭಾಷಣ ಮಾಡಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ವಿ. ಇಬ್ರಾಹಿಂ ನಡುಪದವು, ಮೇಲ್ತೆನೆಯ ಅಧ್ಯಕ್ಷ ಮಂಗಳೂರ ರಿಯಾಝ್, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಮಾಜಿ ಅಧ್ಯಕ್ಷ ರಶೀದ್ ನಂದಾವರ ಭಾಗವಹಿಸಿದ್ದರು.
ವಿವಿಧ ಬ್ಯಾರಿ ಲೇಖಕರ ಪುಸ್ತಕಗಳನ್ನು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಲೋಕಾರ್ಪಣೆಗೊಳಿಸಿದರು.
ಕವಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಿತು.