ADVERTISEMENT

ಮಂಗಳೂರು ವಿವಿ ಘಟಿಕೋತ್ಸವ ನಾಳೆ

ಎಂಎನ್‌ಆರ್, ರೋಹನ್ ಮೊಂತೆರೊ, ಸದಾಶಿವ ಶೆಟ್ಟಿಗೆ ಗೌರವ ಡಾಕ್ಟರೇಟ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 13:10 IST
Last Updated 28 ಮಾರ್ಚ್ 2025, 13:10 IST
ಎಂ.ಎನ್. ರಾಜೇಂದ್ರ ಕುಮಾರ್
ಎಂ.ಎನ್. ರಾಜೇಂದ್ರ ಕುಮಾರ್   

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್, ಹೇರಂಭ ಇಂಡಸ್ಟ್ರೀಸ್ ಸ್ಥಾಪಕ ಸದಾಶಿವ ಶೆಟ್ಟಿ ಕನ್ಯಾನ, ಉದ್ಯಮಿ ರೋಹನ್ ಮೊಂತೆರೊ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ದೊರೆತಿದೆ.

ಮಾ.29ರಂದು ಬೆಳಿಗ್ಗೆ 11 ಗಂಟೆ ವಿವಿ ಆವರಣದ ಮಂಗಳ ಸಭಾಂಗಣದಲ್ಲಿ ನಡೆಯುವ 43ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಯಾಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಮುಂಬೈ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿ.ಎನ್. ರಾಜಶೇಖರನ್ ಪಿಳ್ಳೈ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಉಪಸ್ಥಿತರಿರುವರು ಎಂದು ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ಹೇಳಿದರು.

ಒಟ್ಟು 15 ಅರ್ಜಿಗಳು ಗೌರವ ಡಾಕ್ಟರೇಟ್‌ಗೆ ಸಲ್ಲಿಕೆಯಾಗಿದ್ದವು. ಸಿಂಡಿಕೇಟ್ ಅನುಮತಿ ಪಡೆದು ಎಲ್ಲವನ್ನೂ ಕುಲಾಧಿಪತಿಗಳ ಕಚೇರಿಗೆ ಕಳುಹಿಸಲಾಗಿತ್ತು. ಗೌರವ ಡಾಕ್ಟರೇಟ್‌ ಆಯ್ಕೆಗೆ ರಚಿತವಾಗಿರುವ ಸಮಿತಿ ಈ ಆಯ್ಕೆ ಮಾಡಿದೆ. ಸಮಾಜಸೇವೆ ಕ್ಷೇತ್ರದಲ್ಲಿ ಈ ಮೂವರು ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದಾರೆ ಎಂದರು.

ADVERTISEMENT

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 33 ಮಹಿಳೆಯರು, 31 ಪುರುಷರು ಸೇರಿ ಒಟ್ಟು 64 ಸಂಶೋಧನಾ ವಿದ್ಯಾರ್ಥಿಗಳು, ಮೂವರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಪಿಚ್‌.ಡಿ ಪದವಿ ಪಡೆಯಲಿದ್ದಾರೆ. ಸ್ನಾತಕ ಪದವಿಯಲ್ಲಿ 66, ಸ್ನಾತಕೋತ್ತರ ಪದವಿಯಲ್ಲಿ 61 ಸೇರಿದಂತೆ ಒಟ್ಟು 127 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿದ್ದಾರೆ. ಅವುಗಳಲ್ಲಿ ಕಲಾ ವಿಭಾಗದಲ್ಲಿ ಸ್ನಾತಕ 14, ಸ್ನಾತಕೋತ್ತರ 16, ವಾಣಿಜ್ಯ ವಿಭಾಗದಲ್ಲಿ ಸ್ನಾತಕ 21, ಸ್ನಾತಕೋತ್ತರ 14, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕ 30, ಸ್ನಾತಕೋತ್ತರ 30, ಶಿಕ್ಷಣ ವಿಭಾಗದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ತಲಾ ಒಂದು ಇವೆ. ಸ್ನಾತಕ ಪದವಿಯಲ್ಲಿ 18, ಸ್ನಾತಕೋತ್ತರ ಪದವಿಯಲ್ಲಿ 49 ಮಂದಿ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ ಎಂದರು.

54 ಚಿನ್ನದ ಪದಕ, 56 ನಗದು ಬಹುಮಾನಗಳು ಇವೆ. ದತ್ತಿನಿಧಿಯ ಮೂಲ ಮೊತ್ತದ ಬಡ್ಡಿ ಆಧರಿಸಿ ನಗದು ಬಹುಮಾನ ನೀಡಲಾಗುತ್ತಿತ್ತು. ಈ ಬಾರಿ ಕಡಿಮೆ ಮೊತ್ತ ಇರುವ ನಗದು ಬಹುಮಾನದ ಮೊತ್ತ ಏರಿಕೆ ಮಾಡಿ ₹500 ನೀಡಲಾಗುತ್ತದೆ.

ಸ್ನಾತಕೋತ್ತರ ಕೋರ್ಸ್ ವಿವಿಗೆ: ವಿವಿ ವ್ಯಾಪ್ತಿಯಲ್ಲಿರುವ ನೆಲ್ಯಾಡಿ, ಬನ್ನಡ್ಕ, ಸಂಧ್ಯಾ ಕಾಲೇಜು ಹಾಗೂ ಮಂಗಳ ಗಂಗೋತ್ರಿ ಆವರಣದಲ್ಲಿರುವ ಪದವಿ ಕಾಲೇಜು ಸೇರಿದಂತೆ ಒಟ್ಟು ನಾಲ್ಕು ಘಟಕ ಕಾಲೇಜುಗಳನ್ನು ನಡೆಸುವುದು ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆಯಾಗಿದೆ. ಇದನ್ನು ಸರ್ಕಾರವೇ ವಹಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಎಲ್ಲ ಘಟಕ ಕಾಲೇಜುಗಳಲ್ಲಿ ಇರುವ ಸ್ನಾತಕೋತ್ತರ ಕೋರ್ಸ್‌ಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿವಿಗೆ ಸ್ಥಳಾಂತರಿಸಲಾಗುವುದು. ಘಟಕ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಮಾತ್ರ ಇರಲಿದೆ ಎಂದು ಹೇಳಿದರು.

ಸರ್ಕಾರದ ಅನುಮತಿ ದೊರೆತರೆ ಅರೆಬರೆ ಸ್ಥಿತಿಯಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಸತಿನಿಲಯವನ್ನು ಪಿಪಿಪಿ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಲು ಯೋಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರೊಬ್ಬರು ವಿವಿ ವಸತಿ ನಿಲಯದಲ್ಲಿ ವರ್ಷದಿಂದ ವಾಸ್ತವ್ಯ ಹೂಡಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿ ಅವರು ವಿವಿ ಸಿಂಡಿಕೇಟ್ ಸದಸ್ಯರೂ ಹೌದು. ಅವರು ಇಲ್ಲಿ ವಾಸ್ತವ್ಯ ಮಾಡಿದ ಸಂಬಂಧ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ ಎಂದರು.

ರೋಹನ್ ಮೊಂತೆರೊ

ವಿವಿ ಆವರಣದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಅಂದಾಜು ₹40 ಕೋಟಿ ಬಿಲ್ ಪಾವತಿ ಬಾಕಿ ಇದೆ. ವಿವಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಕಾರಣ ಪಾವತಿಸಲು ಸಾಧ್ಯವಾಗಿಲ್ಲ ಎಂದು ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ ಹೇಳಿದರು.

ಕುಲಸಚಿವ (ಆಡಳಿತ) ಕೆ. ರಾಜು ಮೊಗವೀರ, ಕುಲಸಚಿವ (ಪರೀಕ್ಷಾಂಗ) ಪ್ರೊ. ದೇವೇಂದ್ರಪ್ಪ ಎಚ್ ಇದ್ದರು.

ಸದಾಶಿವ ಶೆಟ್ಟಿ

ಘೋಷಣೆಗೆ ಮುನ್ನವೇ ಫ್ಲೆಕ್ಸ್

ಮಂಗಳೂರು ವಿವಿ ಗೌರವ ಡಾಕ್ಟರೇಟ್‌ಗೆ ಆಯ್ಕೆಯಾದವರ ಹೆಸರನ್ನು ನಿಯಮದಂತೆ ಸಿಂಡಿಕೇಟ್ ಸಭೆಯಲ್ಲಿಟ್ಟು ಅನುಮೋದನೆ ಪಡೆದ ನಂತರ ಘೋಷಣೆ ಮಾಡಲಾಗುತ್ತದೆ. ಶುಕ್ರವಾರ ಬೆಳಿಗ್ಗೆ ಸಿಂಡಿಕೇಟ್ ಸಭೆ ನಡೆದು ನಂತರ ಹೆಸರು ಘೋಷಣೆಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಆದರೆ ಇದಕ್ಕೂ ಪೂರ್ವದಲ್ಲಿ ವಿವಿ ಹೊರ ಆವರಣದ ರಸ್ತೆಯಲ್ಲಿ ಗೌರವ ಡಾಕ್ಟರೇಟ್‌ಗೆ ಆಯ್ಕೆಯಾದ ಇಬ್ಬರಿಗೆ ಶುಭಾಶಯ ಕೋರಿದ ಫ್ಲೆಕ್ಸ್ ಹಾಕಲಾಗಿತ್ತು. ಒಂದು ತಾಸಿನಲ್ಲೇ ಅದನ್ನು ಪುನಃ ತೆರವುಗೊಳಿಲಾಯಿತು ಎಂದು ಮೂಲಗಳು ತಿಳಿಸಿವೆ.

ನಿರುಪಯುಕ್ತ ಆಸ್ತಿಗೂ ತೆರಿಗೆ

ವಿಶ್ವ ಮಂಗಳ ಟ್ರಸ್ಟ್ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಸತಿ ನಿಲಯ ಸೇರಿದಂತೆ ಅನೇಕ ನಿರುಪಯುಕ್ತ ಆಸ್ತಿಗಳು ವಿವಿ ಆವರಣದಲ್ಲಿವೆ. ಇವುಗಳ ಮೇಲೆಯೂ ಸ್ಥಳೀಯ ಪಂಚಾಯಿತಿ ತೆರಿಗೆ ವಿಧಿಸಿತ್ತು. ಈ ಸಂಬಂಧ ಪಂಚಾಯಿತಿ ಅಧ್ಯಕ್ಷರು ಪಿಡಿಒ ಜೊತೆ ಚರ್ಚಿಸಲಾಗಿದೆ. ತೆರಿಗೆ ಬಿಲ್ ಪರಿಷ್ಕರಿಸಿ ನೀಡುವಂತೆ ತಿಳಿಸಲಾಗಿದ್ದು ಬಿಲ್ ಬಂದ ಮೇಲೆ ವಿವಿ ಆ ಮೊತ್ತವನ್ನು ಹಂತ ಹಂತವಾಗಿ ಪಾವತಿಸಲಿದೆ ಎಂದು ಪ್ರೊ. ಧರ್ಮ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2023–24ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾದವರು‌‌

ಸ್ನಾತಕ;22056

ಸ್ನಾತಕೋತ್ತರ;3331

ಪರೀಕ್ಷೆಯಲ್ಲಿ ಉತ್ತೀರ್ಣರಾದವರು

ಸ್ನಾತಕ;15571 (ಶೇ.70.60)

ಸ್ನಾತಕೋತ್ತರ;3152 (ಶೇ 94.63)

ಶೇಕಡಾವಾರು ಉತ್ತೀರ್ಣ ವಿದ್ಯಾರ್ಥಿನಿಯರು;63.16

ವಿದ್ಯಾರ್ಥಿಗಳು;36.83

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.