ADVERTISEMENT

ಮಂಗಳೂರು ವಿವಿ ಆನ್‌ಲೈನ್ ಪರೀಕ್ಷೆ: ಸಭೆ ಬಳಿಕ ನಿರ್ಧಾರ

ಸೆ. 4,5 ಕ್ಕೆ ಪ್ರಾಂಶುಪಾಲರ ಸಭೆ: ಪ್ರೊ. ಪಿ.ಎಸ್.ಯಡಪಡಿತ್ತಾಯ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 16:47 IST
Last Updated 28 ಆಗಸ್ಟ್ 2021, 16:47 IST
ಮಂಗಳೂರು ವಿಶ್ವವಿದ್ಯಾಲಯ
ಮಂಗಳೂರು ವಿಶ್ವವಿದ್ಯಾಲಯ   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಆನ್‌ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಸುವ ಸಂಬಂಧ ಸೆಪ್ಟೆಂಬರ್ 4 ಮತ್ತು 5ರಂದು ಎಲ್ಲ ಕಾಲೇಜುಗಳ ಪ್ರಾಂಶುಪಾಲರ ವರ್ಚುವಲ್ ಸಭೆ ನಡೆಸಿ, ಅಲ್ಲಿ ವ್ಯಕ್ತವಾದ ಅಭಿಪ್ರಾಯ ಕ್ರೋಡೀಕರಿಸಿ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳನ್ನು ಒಳಗೊಂಡು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 207 ಕಾಲೇಜುಗಳು ಇವೆ. ಪದವಿಯ 6ನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್ ಪರೀಕ್ಷೆಯನ್ನು ಆನ್‌ಲೈನ್ ಅಥವಾ ಭೌತಿಕವಾಗಿ ನಡೆಸುವ ಬಗ್ಗೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಆಧರಿಸಿ, ಪರೀಕ್ಷಾ ಕ್ರಮದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪದವಿ ತರಗತಿಗಳ 1,3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿಯುವ ಹಂತದಲ್ಲಿವೆ. ಇಂಗ್ಲಿಷ್ ವಿಷಯದ ಮೌಲ್ಯಮಾಪನ ಕೂಡ ಮುಗಿದಿದೆ. ವಾಣಿಜ್ಯ ವಿಷಯದ ಮೌಲ್ಯಮಾಪನ ಸೋಮವಾರದಿಂದ ಆರಂಭವಾಗಲಿದೆ. ಹಿಂದಿನ ವರ್ಷದ ಬಾಹ್ಯ ಅಂಕ ಮತ್ತು ಆಂತರಿಕ ಅಂಕದ ಮೌಲ್ಯಮಾಪನ ಆಧರಿಸಿ 2 ಮತ್ತು 4 ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲಾಗುತ್ತದೆ. ಆದರೆ, ಪದವಿಯ 6ನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್ ಪರೀಕ್ಷೆ ಮಾಡಿಯೇ ಫಲಿತಾಂಶ ಘೋಷಿಸಬೇಕಾಗಿದೆ ಎಂದು ತಿಳಿಸಿದರು.

ADVERTISEMENT

‘ಕೆಲವು ಪ್ರಾಂಶುಪಾಲರು ಭೌತಿಕವಾಗಿ ಪರೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ. ಪರೀಕ್ಷೆ ನಡೆಸಲು 15–20 ದಿನಗಳು ಬೇಕಾಗುತ್ತವೆ. ನಂತರ ಮೌಲ್ಯಮಾಪನ ನಡೆಸಲು ಇಷ್ಟೇ ದಿನಗಳು ಬೇಕು. ಈಗಾಗಲೇ ಡೀಮ್ಡ್ ವಿಶ್ವವಿದ್ಯಾಲಯಗಳು ಫಲಿತಾಂಶ ಘೋಷಿಸಿವೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಆದಷ್ಟು ಶೀಘ್ರ ಪರೀಕ್ಷೆ ನಡೆಸಬೇಕಾಗಿದೆ. ಆನ್‌ಲೈನ್‌ನಲ್ಲಿ ಬಹುಆಯ್ಕೆ ಉತ್ತರದ ಮಾದರಿಯಲ್ಲಿ ಒಂದೂವರೆ ತಾಸಿನ ಪರೀಕ್ಷೆ ನಡೆಸಿ, ಒಂದು ವಾರದಲ್ಲಿ ಮೌಲ್ಯಮಾಪನ ಘೋಷಿಸಲು ಸಾಧ್ಯವಿದೆ. ಪುಣೆಯಲ್ಲಿ ಈ ಮಾದರಿ ಯಶಸ್ವಿಯಾಗಿ ನಡೆದಿದೆ. ಹಂಪಿ ವಿಶ್ವವಿದ್ಯಾಲಯ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹ ಆನ್‌ಲೈನ್ ಪರೀಕ್ಷೆಗಳು ನಡೆದಿವೆ ಎಂದು ವಿವರಿಸಿದರು.

ಅಫ್ಗನ್‌ ವಿದ್ಯಾರ್ಥಿಗಳಿಂದ 150ಕ್ಕೂ ಹೆಚ್ಚು ಅರ್ಜಿ

ಅಫ್ಗಾನಿಸ್ತಾನದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅರ್ಜಿಗಳು ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾಗಿವೆ. ಅಫ್ಗಾನ್ ತಾಲಿಬಾನಿಗಳ ವಶವಾಗಿರುವ ಸಂದರ್ಭದಲ್ಲಿ, ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ದಾಖಲೆಗಳನ್ನು ವಿಶೇಷವಾಗಿ ಪರಿಶೀಲಿಸಲಾಗುತ್ತದೆ. ಕೆಲವರು, ಮೈಸೂರು, ಬೆಂಗಳೂರು, ಮಂಗಳೂರು ಈ ಮೂರು ವಿಶ್ವವಿದ್ಯಾಲಯಗಳಿಗೆ ಏಕಕಾಲಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ತಮಗೆ ಬೇಕಾದ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಪ್ರೊ. ಯಡಪಡಿತ್ತಾಯ ತಿಳಿಸಿದರು.

ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಡೀನ್‌ಗಳನ್ನು ಒಳಗೊಂಡ ಸಮಿತಿ, ಕುಲಸಚಿವರು, ಪರಿಶೀಲಿಸಿ, ಕುಲಪತಿಗೆ ಸಲ್ಲಿಸುತ್ತಾರೆ. ಅಕಾಡೆಮಿಕ್ ಕೌನ್ಸಿಲ್‌ನಲ್ಲಿ ಸಮ್ಮತಿ ದೊರೆತ ಮೇಲೆ ಪ್ರವೇಶ ಪ್ರಕ್ರಿಯೆಗೆ ಅನುಮತಿ ದೊರೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.