ADVERTISEMENT

ಮಂಗಳೂರು–ವಿಜಯಪುರ ರೈಲು ಶೀಘ್ರ ಆರಂಭ: ಸಮಯ ಬದಲಾವಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 7:44 IST
Last Updated 24 ಆಗಸ್ಟ್ 2021, 7:44 IST
ನಳಿನ್‌ಕುಮಾರ್ ಕಟೀಲ್‌
ನಳಿನ್‌ಕುಮಾರ್ ಕಟೀಲ್‌   

ಮಂಗಳೂರು: ಕೋವಿಡ್–19 ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು–ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಮತ್ತೆ ಶುರುವಾಗಲಿದೆ. ಈಗಾಗಲೇ ರೈಲು ಆರಂಭಕ್ಕೆ ನೈರುತ್ಯ ರೈಲ್ವೆ ಪ್ರಸ್ತಾವ ಸಲ್ಲಿಸಿದ್ದು, ಇದೀಗ ವೇಳಾಪಟ್ಟಿಯನ್ನು ಪರಿಷ್ಕರಿಸುವಂತೆ ಸಂಸದ ನಳಿನ್‌ಕುಮಾರ್ ಕಟೀಲ್‌, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಿದ್ದಾರೆ.

ಹೊಸ ಪ್ರಸ್ತಾವದ ಪ್ರಕಾರ ಈ ರೈಲು ಮಂಗಳೂರು ಜಂಕ್ಷನ್‌ ನಿಲ್ದಾಣಕ್ಕೆ ಮಧ್ಯಾಹ್ನ 12.40ಕ್ಕೆ ಬರಲಿದ್ದು, ಸಂಜೆ 4.30ಕ್ಕೆ ಇಲ್ಲಿಂದ ಹೊರಡಲಿದೆ. ಈ ವೇಳಾಪಟ್ಟಿಯಿಂದ ಕರಾವಳಿಯ ಜನರಿಗೆ ತೊಂದರೆ ಆಗಲಿದೆ. ಈಗಾಗಲೇ ರೈಲ್ವೆ ಬಳಕೆದಾರರ ಸಂಘ, ಸಾರ್ವಜನಿಕರಿಗೆ ನೈರುತ್ಯ ರೈಲ್ವೆಗೆ ಮನವಿ ಸಲ್ಲಿಸಲಾಗಿದ್ದು, ವೇಳಾಪಟ್ಟಿ ಪರಿಷ್ಕರಿಸುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳೂರು–ವಿಜಯಪುರ ರೈಲಿನ ವೇಳಾಪಟ್ಟಿ ಪರಿಷ್ಕರಿಸಬೇಕು. ಈ ರೈಲು ಬೆಳಿಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಬೇಕು. ಸಂಜೆ 5.30ಕ್ಕೆ ಇಲ್ಲಿಂದ ಹೊರಡುವಂತೆ ಮಾಡಬೇಕು. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದ್ದಾರೆ.

ADVERTISEMENT

ಈ ವೇಳಾಪಟ್ಟಿಯಲ್ಲಿ ರೈಲು ನಿಲುಗಡೆಗೆ ಅನಾನುಕೂಲ ಆದಲ್ಲಿ, ರೈಲನ್ನು ಬಂದರಿನ ಗೂಡ್‌ಶೆಡ್‌ ಯಾರ್ಡ್‌ ಅಥವಾ ಉಳ್ಳಾಲ ನಿಲ್ದಾಣ ಗಳಲ್ಲಿ ನಿಲುಗಡೆ ಮಾಡಲು ಅವಕಾಶ ವಿದೆ. ಸಮಯಕ್ಕೆ ಸರಿಯಾಗಿ ಹೊರ ಡುವ ನಿಲ್ದಾಣಕ್ಕೆ ತರಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ಮಂಗಳೂರು–ಚೆನ್ನೈ ರೈಲು: ಮಂಗಳೂರಿನಿಂದ ನೇರವಾಗಿ ಚೆನ್ನೈಗೆ ರೈಲು ಸಂಚಾರ ಆರಂಭಿಸಬೇಕು. ಮಂಗಳೂರು–ಹಾಸನ– ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ರೈಲು ಓಡಿಸಬೇಕು ಎಂದು ನಳಿನ್‌ಕುಮಾರ್ ಕಟೀಲ್‌ ಮನವಿ ಮಾಡಿದ್ದಾರೆ.

ಸದ್ಯಕ್ಕೆ ಮಂಗಳೂರು–ಚೆನ್ನೈ ರೈಲು ಪಾಲ್ಘಾಟ್‌, ಕೊಯಮತ್ತೂರು ಮಾರ್ಗವಾಗಿ ಸಂಚರಿಸುತ್ತಿದ್ದು, 890 ಕಿ.ಮೀ. ಅಂತರವನ್ನು ಕ್ರಮಿಸುತ್ತಿದೆ. ಹಾಸನ–ಬೆಂಗಳೂರು ಮಾರ್ಗದಲ್ಲಿ ಓಡಿಸಿದಲ್ಲಿ, 200 ಕಿ.ಮೀ.ನಷ್ಟು ಉಳಿತಾಯ ಆಗಲಿದೆ. 720 ಕಿ.ಮೀ. ಅಂತರದಲ್ಲಿ ಚೆನ್ನೈ ತಲುಪಬಹುದಾಗಿದೆ ಎಂದು ಹೇಳಿದ್ದಾರೆ.

ಈ ಮಾರ್ಗದಲ್ಲಿ ಹೊಸ ರೈಲು ಆರಂಭಿಸಲು ಅಡ್ಡಿಗಳಿದ್ದಲ್ಲಿ, ಸದ್ಯಕ್ಕೆ ಸಂಚರಿಸುತ್ತಿರುವ ಚೆನ್ನೈ–ಬೆಂಗಳೂರು ವೃಂದಾವನ ಎಕ್ಸ್‌ಪ್ರೆಸ್‌ ರೈಲನ್ನು ಯಶವಂತಪುರ–ಹಾಸನ ಮಾರ್ಗದಲ್ಲಿ ಮಂಗಳೂರಿನವರೆಗೆ ವಿಸ್ತರಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.