
ಉಳ್ಳಾಲ: ಮಂಜನಾಡಿ ಕೊಪ್ಪಲಕೋಡಿಯಲ್ಲಿ 2025ರ ಮೇ ತಿಂಗಳಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತ ಪ್ರಕರಣ ಸಂಬಂಧ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ)ದ ತಜ್ಞರ ತಂಡದಿಂದ ತಾಂತ್ರಿಕ ತನಿಖೆ ಮಂಗಳವಾರ ಆರಂಭವಾಗಿದೆ.
ಎನ್‌ಐಟಿಕೆ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪಳನಿಸಾಮಿ ಟಿ., ಡಾ.ಶ್ರೀವಲ್ಸಾ ಕೊಳಥಾಯರ್, ಜಿಲ್ಲಾ ಪಂಚಾಯತ್ ಎಂಜಿನಿಯರ್‌ಗಳಾದ ನಿತಿನ್ ಹಾಗೂ ಲಾಯ್ಡ್ ಹಾಗೂ ಮಂಜನಾಡಿ ಗ್ರಾ.ಪಂ ಸಿಬ್ಬಂದಿ ಸಾಹುಲ್ ಹಮೀದ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಜಿ.ಪಂ ಎಂಜಿನಿಯರ್ ವಿರುದ್ಧ ಅಸಮಾಧಾನ: ಪರಿಶೀಲನೆಗೆ ಬಂದ ಜಿಲ್ಲಾ ಪಂಚಾಯತ್ ಎಂಜಿನಿಯರ್ ನಿತಿನ್ ಅವರು, ಮನೆಯವರೆಗೂ ರಸ್ತೆ ಮಾಡಿಕೊಡಲಾಗಿದೆ. ಸದ್ಯ ನೀವು ಬೇರೆ ಆರೋಪ ಮಾಡುತ್ತಿದ್ದಿರಿ ಎಂದು ಹೇಳುತ್ತಿದ್ದಂತೆ, ಸುಳ್ಳು ಆಪಾದನೆಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸಬೇಡಿ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಾ.ಪಂ ಮಾಜಿ ಸದಸ್ಯ ನಕ್ಕರೆ ಬಾವು ಅಹಮ್ಮದ್ ಕುಂಞಿ ಅವರು, ‘ಚರಂಡಿ, ರಸ್ತೆ ಮಾಡಿದ್ದೇವೆ. ಎಲ್ಲವನ್ನು ಮಾಡಿದರೂ ಆರೋಪ ನಡೆಸುವುದು ಸೂಕ್ತವಲ್ಲ’ ಎಂದಾಗ ಕೆಲಕಾಲ ವಾಗ್ವಾದ ನಡೆಯಿತು.
ಈ ವೇಳೆ ಪ್ರತಿಕ್ರಿಯಿಸಿದ ಸಂತ್ರಸ್ತ ಕುಟುಂಬ ಸದಸ್ಯರು, ‘ಎಲ್ಲವನ್ನು ನಿಯಮಬದ್ಧವಾಗಿ ಮಾಡುತ್ತಿದ್ದಲ್ಲಿ ದಾಖಲೆ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದೀರಿ?. ದಾಖಲೆಗಳ ಆಧಾರದಲ್ಲಿ ಆಪಾದನೆ ಮಾಡಿ, ಅದನ್ನು ಬಿಟ್ಟು ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗುವುದನ್ನು ತಪ್ಪಿಸಬೇಡಿ ಎಂದರು.
ಈ ವೇಳೆ ಸಂತ್ರಸ್ತ ಕುಟುಂಬದ ಸೀತಾರಾಮ, ತೇಜು ಕುಮಾರ್, ಸುಮಲತಾ ಕೊಣಾಜೆ ಮಾಹಿತಿ ನೀಡಿದರು.
ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿ ಮೃತಪಟ್ಟು, ಇಬ್ಬರಿಗೆ ಅಂಗವೈಕಲ್ಯ ಉಂಟಾಗಿತ್ತು. ಸಂತ್ರಸ್ತರ ಪೀಡಿತ ಕುಟುಂಬದ ಮನವಿ, ಮಾಧ್ಯಮಗಳಲ್ಲಿ ಬಂದ ವರದಿ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಒತ್ತಡದ ನಂತರ ಜಿಲ್ಲಾಡಳಿತವು ಪ್ರಕರಣದ ಕುರಿತು ತಾಂತ್ರಿಕ ತನಿಖೆ ನಡೆಸುವಂತೆ ಎನ್‌ಐಟಿಕೆಗೆ ಮನವಿ ಮಾಡಿತ್ತು.