ADVERTISEMENT

ಮಂಗಳೂರು: ತುಳು ಲಿಪಿಯಲ್ಲೂ ಪಾಲಿಕೆ ಹೆಸರು

ತುಳು ನಾಮಫಲಕ ಅನಾವರಣಗೊಳಿಸಿದ ಮೇಯರ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 3:41 IST
Last Updated 25 ಫೆಬ್ರುವರಿ 2025, 3:41 IST
ಪಾಲಿಕೆಯ ಕೇಂದ್ರ ಕಚೇರಿಯ ನಾಮಫಲಕದಲ್ಲಿ ‘ಮಂಗಳೂರು ಮಹಾನಗರ ಪಾಲಿಕೆ’ ಎಂದು ತುಳು ಲಿಪಿಯಲ್ಲೂ ಬರೆಯಲಾಗಿದೆ
ಪಾಲಿಕೆಯ ಕೇಂದ್ರ ಕಚೇರಿಯ ನಾಮಫಲಕದಲ್ಲಿ ‘ಮಂಗಳೂರು ಮಹಾನಗರ ಪಾಲಿಕೆ’ ಎಂದು ತುಳು ಲಿಪಿಯಲ್ಲೂ ಬರೆಯಲಾಗಿದೆ   

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಕೇಂದ್ರ ಕಚೇರಿಯ ಕಟ್ಟಡದ ಮುಖ್ಯದ್ವಾರದ ಬಳಿಯ ನಾಮ ಫಲಕದಲ್ಲಿ ‘ಮಂಗಳೂರು ಮಹಾನಗರ ಪಾಲಿಕೆ’ ಎಂಬ ತುಳು ಲಿಪಿಯ ಸಾಲನ್ನು ಸೇರಿಸಿದೆ. ಮೇಯರ್ ಮನೋಜ್ ಕುಮಾರ್ ಕೋಡಿಕಲ್‌ ಅವರು ಈ ನಾಮಫಲಕವನ್ನು ಸೋಮವಾರ ಅನಾವರಣಗೊಳಿಸಿದರು.

‘ಕಚೇರಿಗಳಲ್ಲೂ ತುಳು ಲಿಪಿಗೆ ಮಹತ್ವ ಸಿಗಬೇಕು ಎಂದು ಹೋರಾಟ ನಡೆಸುತ್ತಿರುವ ತುಳು ಸಂಘಟನೆಗಳ ಒತ್ತಾಸೆಗೆ ಮನ್ನಣೆ ನೀಡುವ ಸಲುವಾಗಿ ಪಾಲಿಕೆಯು ಈ ನಿರ್ಧಾರ ಕೈಗೊಂಡಿದೆ. ಇದು ತುಳು ಸಂಘಟನೆಗಳ ಹೋರಾಟಕ್ಕೆ ಸಂದ ಗೌರವ’ ಎಂದು ಮೇಯರ್ ಹೇಳಿದರು.

‘ತುಳು ಲಿಪಿ ಬಳಕೆ ಉತ್ತೇಜಿಸಲು ನಾವು ಪಾಲಿಕೆಯ ಕೇಂದ್ರ ಕಚೇರಿಯ ಮುಖ್ಯದ್ವಾರದ ಬಳಿಯ ಮುಖ್ಯ ನಾಮಫಲಕದಲ್ಲೇ ಅದಕ್ಕೆ ಸ್ಥಾನ ಕಲ್ಪಿಸಿದ್ದೇವೆ. ಸುರತ್ಕಲ್ ಮತ್ತು ಕದ್ರಿಯಲ್ಲಿರುವ ಪಾಲಿಕೆಯ ವಲಯ ಕಚೇರಿಗಳ ನಾಮಫಲಕಗಳಲ್ಲೂ ತುಳು ಲಿಪಿಯನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಲಿದ್ದೇವೆ. ಪಾಲಿಕೆಯ ಕುದ್ಮುಲ್ ರಂಗರಾವ್‌ ಪುರಭವನ ಮತ್ತು ಉರ್ವದ ಅಂಬೇಡ್ಕರ್ ಭವನದ ನಾಮಫಲಕಗಳಲ್ಲೂ ತುಳು ಲಿಪಿಯನ್ನು ಬಳಸಲು ಕ್ರಮ ವಹಿಸುತ್ತೇನೆ. ನಗರವನ್ನು ಪ್ರವೇಶ ದ್ವಾರಗಳ ಬಳಿಯೂ ತುಳುವಿನಲ್ಲಿ ಸ್ವಾಗತ ಕೋರುವ ಫಲಕಗಳನ್ನು ಅಳವಡಿಸಲಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಇತರ ನಗರ ಸ್ಥಳೀಯ ಸಂಸ್ಥೆಗಳೂ ತಮ್ಮ ನಾಮ ಫಲಕಗಳಲ್ಲಿ ತುಳು ಲಿಪಿಯನ್ನು ಬಳಸುವುದಕ್ಕೆ ಇದು ಪ್ರೇರಣೆ ಆಗಲಿದೆ’ ಎಂದರು.

ADVERTISEMENT

‘ತುಳುವಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ನಾವು ಕೇಳುವುದಿಲ್ಲ. ಆದರೆ ರಾಜ್ಯದಲ್ಲಿ ಅದಕ್ಕೆ ಅಧಿಕೃತ ಭಾಷೆಯ ಸ್ಥಾನಮಾನವನ್ನಾದರೂ ನೀಡಬೇಕು. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳುವನ್ನು ಸೇರ್ಪಡೆಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ, ನವಮಂಗಳೂರು ಬಂದರು ಹಾಗೂ ರೈಲು ನಿಲ್ದಾಣಗಳ ನಾಮಫಲಕಗಳಲ್ಲೂ ತುಳು ಲಿಪಿಯನ್ನು  ಅಳವಡಿಸಿಕೊಳ್ಳುವಂತೆ ಶಾಸಕರು ಮತ್ತು ಸಂಸದರು ಸರ್ಕಾರವನ್ನು ಒತ್ತಾಯಿಸಬೇಕು’ ಎಂದರು.

ಶಾಕ ಡಾ.ವೈ.ಭರತ್ ಶೆಟ್ಟಿ, ‘ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ, ತಮಿಳು, ಮಲಯಾಳ ಮತ್ತು ತೆಲುಗಿಗೆ ಅಧಿಕೃತ ಭಾಷೆಯ ಸ್ಥಾನಮಾನ ಸಿಕ್ಕಿದೆ. ಅವು ಸಂವಿಧಾನದ ಎಂಟನೇ ಪರಿಚ್ಛೇದದಲ್ಲೂ ಸ್ಥಾನ ಪಡೆದಿವೆ. ಆದರೆ, ಅಷ್ಟೇ ಮಹತ್ವ ಹೊಂದಿರುವ ತುಳು ಭಾಷೆಗೆ ಈ ಮನ್ನಣೆ ಇನ್ನೂ ಸಿಕ್ಕಿಲ್ಲ. ಇದನ್ನು ಪಡೆಯಲು ತುಳುವರು ಅಭಿಪ್ರಾಯಭೇದಗಳನ್ನೆಲ್ಲ ಮರೆತು ಒಂದಾಗಬೇಕು’ ಎಂದರು. 

’ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತುಳುನಾಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಹಾಗೂ ರೈಲು ನಿಲ್ದಾಣಕ್ಕೆ ತುಳುನಾಡು ರೈಲು ನಿಲ್ದಾಣ ಎಂದು ಹೆಸರು ಇಡಬೇಕು. ಈ ನ್ಯಾಯೋಚಿತ ಬೇಡಿಕೆ ಈಡೇರಿಕೆಗಾಗಿ ಸೂಕ್ತ ವೇದಿಕೆಗಳಲ್ಲಿ ಧ್ವನಿ ಎತ್ತುತ್ತೇನೆ’ ಎಂದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್‌, ಮಾಜಿ ಮೇಯರ್‌ ಕೆ.ಭಾಸ್ಕರ ಮೊಯಿಲಿ, ವಿವಿಧ ತುಳು ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪಾಲಿಕೆ ವಲಯ ಕಚೇರಿ, ಪುರಭವನ, ಅಂಬೇಡ್ಕರ್‌ ಭವನದಲ್ಲಿ ತುಳು ಫಲಕ ಶೀಘ್ರ  ರೈಲು ನಿಲ್ದಾಣ, ವಿಮಾನನಿಲ್ದಾಣಕ್ಕೆ ‘ತುಳುನಾಡು’ ಎಂದು ಹೆಸರಿಸಲು ಒತ್ತಾಯ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಮೇಯರ್‌ ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.