ADVERTISEMENT

ಜುಲೈ 29ರಿಂದ ‘ಟೈಗರ್’ ಕಾರ್ಯಾಚರಣೆ: ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು

ಅನಧಿಕೃತ ಬೀದಿ ಬದಿ ವ್ಯಾಪಾರಿಗಳಿಂದ ಸಮಸ್ಯೆ: ಫೋನ್‌–ಇನ್ ಕಾರ್ಯಕ್ರಮದಲ್ಲಿ ದೂರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 4:54 IST
Last Updated 25 ಜುಲೈ 2024, 4:54 IST
ಫೋನ್–ಇನ್ ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶಟ್ಟಿ ಕಣ್ಣೂರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಉಪಮೇಯರ್‌ ಸುನೀತಾ ಭಾಗವಹಿಸಿದ್ದರು - ಪ್ರಜಾವಾಣಿ ಚಿತ್ರ
ಫೋನ್–ಇನ್ ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶಟ್ಟಿ ಕಣ್ಣೂರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಉಪಮೇಯರ್‌ ಸುನೀತಾ ಭಾಗವಹಿಸಿದ್ದರು - ಪ್ರಜಾವಾಣಿ ಚಿತ್ರ   

ಮಂಗಳೂರು: ‘ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುವುದನ್ನು ತಡೆಯಲು ಇದೇ 29ರಿಂದ ‘ಟೈಗರ್‌’ ಕಾರ್ಯಾಚರಣೆ ನಡೆಸಲಿದ್ದೇವೆ’ ಎಂದು ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.

ತಮ್ಮ ಕಚೇರಿಯಲ್ಲಿ ಬುಧವಾರ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

‘ನಗರದಲ್ಲಿ ಬೀದಿ ಬದಿ ತಳ್ಳುಗಾಡಿಗಳನ್ನು ಇಟ್ಟುವ್ಯಾಪಾರ ನಡೆಸಲು ಮಾತ್ರ ಅವಕಾಶವಿದೆ. ಆದರೆ ಕೆಲವರು ಅನಧಿಕೃತವಾಗಿ ಒಂದೇ ಕಡೆ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ಕೆಲವರು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅನೇಕ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ’ ಎಂದರು.

ADVERTISEMENT

‘ವಿಮಾನನಿಲ್ದಾಣ ರಸ್ತೆಯಲ್ಲಿ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ತೆರಳಿದ್ದ ಪಾಲಿಕೆಯ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲಿಸುವುದಾಗಿ ಕದ್ರಿ ಠಾಣೆಯ ಪೊಲೀಸರು ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳ ಸ್ಥೈರ್ಯ ಕುಗ್ಗಿಸುವ ಇಂತಹ ನಡೆ ಸರಿಯಲ್ಲ. ಪೊಲೀಸರು ಪಾಲಿಕೆಗೆ ಸಹಕಾರ ನೀಡಬೇಕು. ಪೊಲೀಸರ ನೆರವು ಪಡೆದೇ ಟೈಗರ್ ಕಾರ್ಯಾಚರಣೆ  ನಡೆಸುವಂತೆ  ಸೂಚನೆ ನೀಡಿದ್ದೇನೆ’ ಎಂದರು.

‘ಬೀದಿಬದಿ ವ್ಯಾಪಾರ ನಡೆಸಲೆಂದೇ ನಗರದಲ್ಲಿ ಲೇಡಿಗೋಷನ್, ಕಂಕನಾಡಿ, ಮಣ್ಣಗುಡ್ಡೆಗಳಲ್ಲಿ ಜಾಗ ಗುರುತಿಸಲಾಗಿದೆ. ಕೆಲವೆಡೆ ಇದಕ್ಕೆ ಸ್ಥಳೀಯರ ವಿರೋಧವಿದೆ. ಲೇಡಿಗೋಷನ್ ಬಳಿಯ ಬೀದಿ ಬದಿ ವ್ಯಾಪಾರ ವಲಯವನ್ನು ತಿಂಗಳ ಒಳಗೆ ಆರಂಭಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ರೈಲ್ವೆ ಇಲಾಖೆಯ ಕಾಮಗಾರಿಯಿಂದಾಗಿ ಪಡೀಲ್‌–ವೀರನಗರ ನಡುವೆ ಓಡಾಡುವವರು ಸಮಸ್ಯೆ ಎದುರಿಸುತ್ತಿದ್ದಾರೆ.  ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಲೂ ಸಾಧ್ಯವಾಗದ ಸ್ಥಿತಿ ಇಲ್ಲಿದೆ. ಸುಮಾರು 700 ಕುಟುಂಬಗಳು ಈ ಸಮಸ್ಯೆಯಿಂದಾ ಹೈರಾಣಾಗಿವೆ. ರೈಲ್ವೆ ಮತ್ತು ಸ್ಥಳೀಯಾಡಳಿತದ ನಡುವೆ ಸಮನ್ವಯಕ್ಕೆ ಸಂಸದರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಸ್ಯೆಯನ್ನು ಸಮಿತಿ ಸಭೆಯಲ್ಲಿ ಚರ್ಚಿಸಿ ಇತ್ಯರ್ಥಪಡಿಸಲು ಕ್ರಮವಹಿಸುತ್ತೇನೆ’ ಎಂದು ಮೇಯರ್ ಭರವಸೆ ನೀಡಿದರು.

ಒಟ್ಟು 24 ಮಂದಿಯ ಅಳಲು ಆಲಿಸಿದ ಮೇಯರ್‌ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಉಪಮೇಯರ್‌ ಸುನೀತಾ, ಪಾಲಿಕೆ ಉಪಾಯುಕ್ತ ಗಿರೀಶ್‌ನಂದನ್‌ ಎಂ. ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು 

‘ಇ –ರಿಕ್ಷಾಕ್ಕೆ ನಿಲ್ದಾಣ ಕೊಡಿಸಿ’

ನಗರದ ರಿಕ್ಷ ನಿಲ್ದಾಣಗಳಲ್ಲಿ ಇ–ರಿಕ್ಷಾಗಳನ್ನು ನಿಲ್ಲಿಸಲು ಹಳೆ ರಿಕ್ಷಾಗಳ ಮಾಲೀಕರು ಬಿಡುತ್ತಿಲ್ಲ. ಇ ರಿಕ್ಷಾಗಳು ದಿನವಿಡೀ ತಿರುಗಾಡುತ್ತಲೇ ಇರಬೇಕಾದ ಸ್ಥಿತಿ ಇದೆ. ಇ– ರಿಕ್ಷಾಗಳನ್ನು ನೋಂದಣಿ ಮಾಡಿಸಿ ನಿಲ್ದಾಣದಲ್ಲಿ ನಿಲ್ಲಿಸಲು ಅವಕಾಶ ನೀಡದೆ ಇರುವುದು ಸರಿಯಲ್ಲ. ನಗರದಲ್ಲಿ  600ಕ್ಕೂ ಹೆಚ್ಚು ಇ– ರಿಕ್ಷಾಗಳಿವೆ. ಅವುಗಳ ಚಾಲಕರಿಗೆ ಸಾಲ ಕಟ್ಟಲೂ ಸಾಧ್ಯವಾಗುತ್ತಿಲ್ಲ ಎಂದು ರವೀಂದ್ರ ಗಮನ ಸೆಳೆದರು. ‘ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ’ ಎಂದು ಮೇಯರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.