ADVERTISEMENT

ವೈದ್ಯಕೀಯ ಸಂಶೋಧನೆಗೆ ನೆರವು ಅಗತ್ಯ: ಡಾ. ವೆಂಕಟೇಶ್

ಅಂತರರಾಷ್ಟ್ರೀಯ ಮಟ್ಟದ ಸಮಾವೇಶ: ಮಣಿಪಾಲ ವಿವಿ ಕುಲಪತಿ ಡಾ. ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 1:36 IST
Last Updated 26 ನವೆಂಬರ್ 2021, 1:36 IST
ನಿಟ್ಟೆ ವಿಶ್ವವಿದ್ಯಾಲಯದ ಆವಿಷ್ಕಾರ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಹಿರಿಯ ವಿಜ್ಞಾನಿಗಳಾದ ಪ್ರೊ. ಜಯರಾಮ ಎಸ್, ಡಾ.ಮಧುಬಾಲ, ಇಡ್ಯಾ ಕರುಣಾಸಾಗರ್ ಅವರನ್ನು ಸನ್ಮಾನಿಸಲಾಯಿತು.
ನಿಟ್ಟೆ ವಿಶ್ವವಿದ್ಯಾಲಯದ ಆವಿಷ್ಕಾರ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಹಿರಿಯ ವಿಜ್ಞಾನಿಗಳಾದ ಪ್ರೊ. ಜಯರಾಮ ಎಸ್, ಡಾ.ಮಧುಬಾಲ, ಇಡ್ಯಾ ಕರುಣಾಸಾಗರ್ ಅವರನ್ನು ಸನ್ಮಾನಿಸಲಾಯಿತು.   

ಉಳ್ಳಾಲ: ಸಾಂಕ್ರಾಮಿಕ ಕಾಯಿಲೆಯ ಕಾಲಘಟ್ಟದಲ್ಲಿ ವೈದ್ಯಕೀಯ ವಿಭಾಗದ ಸಂಶೋಧನಾ ಕ್ಷೇತ್ರದ ವೇಗ ಹೆಚ್ಚಿದೆ. ಹಿಂದೆ 10 ವರ್ಷಗಳಲ್ಲಿ ನಡೆಯುತ್ತಿದ್ದ ಆವಿಷ್ಕಾರಗಳು ಕೇವಲ ಎರಡು ತಿಂಗಳುಗಳಲ್ಲಿ ನಡೆದಿವೆ. ಈ ಕ್ಷೇತ್ರಕ್ಕೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಸಹಾಯ ಬೇಕಾಗಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ ವೆಂಕಟೇಶ್ ಅಭಿಪ್ರಾಯಪಟ್ಟರು.

ಕ್ಷೇಮ ಆಸ್ಪತ್ರೆ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ವತಿಯಿಂದ ದೇರಳಕಟ್ಟೆ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ಆವಿಷ್ಕಾರ ಸಭಾಂಗಣದಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ 42 ನೇ ವರ್ಷದ ಇಂಡಿಯನ್ ಅಸೋಸಿಯೇಷನ್ ಆಫ್ ಬಯೊಮೆಡಿಕಲ್ ಸೈಂಟಿಸ್ಟ್‌ನ (ಐಎಬಿಎಂಎಸ್) ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ಹಾಗೂ ಈ ಪ್ರಯುಕ್ತ ನಡೆದ ಬಯೊಮೆಡಿಕಲ್ ವಿಜ್ಞಾನದಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಪ್ರಗತಿಗಳ ಸಮಗ್ರ ವಿಧಾನ ಮತ್ತು ಡಾ. ಶಾರದಾ ಸುಬ್ರಹ್ಮಣಿಯನ್ ಸ್ಮರಣಾರ್ಥ ಆರೋಗ್ಯ ವಿಜ್ಞಾನ ಸಂಶೋಧನೆಯಲ್ಲಿ ಮೂಲಭೂತ ಮತ್ತು ಸುಧಾರಿತ ತಂತ್ರಗಳ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಆರೋಗ್ಯ ವಿಜ್ಞಾನದಲ್ಲಿ ಬಹುಶಿಸ್ತಿನ ವಿಧಾನವನ್ನು ಬಲಪಡಿಸುವ ಜೊತೆಗೆ ಸಂಶೋಧಕರ ಕಾರ್ಯಕ್ಷಮತೆಯ ವೇಗವನ್ನು ಹೆಚ್ಚಿಸುವ ತರಬೇತಿಗಳ ಅವಶ್ಯಕತೆ ಇದೆ. ಅಗತ್ಯ ವ್ಯವಸ್ಥೆ ಹಾಗೂ ಸೀಮಿತ ಅನುದಾನದ ಕೊರತೆಯು ಸಂಶೋಧನೆಯ ವೇಗಕ್ಕೆ ತಡೆಯೊಡ್ಡಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಶೋಧನೆಗೆ
₹ 20 ಸಾವಿರ ಕೋಟಿ ಅನುದಾನ ಇರುವುದು ವ್ಯವಸ್ಥೆಗೆ ಪೂರಕವಾಗಲಿದೆ ಎಂದರು.

ADVERTISEMENT

ನಿಟ್ಟೆ ವಿವಿ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ‘ನಿಟ್ಟೆ ಯುನಿವರ್ಸಿಟಿ ಸೆಂಟರ್ ಫಾರ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಹಲವು ವರ್ಷಗಳಿಂದ ಪದವಿ ಶಿಕ್ಷಣ ನೀಡುತ್ತಿದೆ. ಈ ಸೆಂಟರ್‌ ಮೂಲಕ ಸ್ಟೆಮ್ ಸೆಲ್, ಆಣ್ವಿಕ, ವ್ಯಾಕ್ಸಿನ್ ಅನ್ನು ಸೈಟೊಲೊಜಿಕಲ್ ಸಂಶೋಧಕರು ಆವಿಷ್ಕಾರ ಮಾಡುವಲ್ಲಿ ಸಫಲರಾಗಿರುವುದು ಹೆಮ್ಮೆಯ ಸಂಗತಿ’ ಎಂದರು.

ಐಎಬಿಎಂಎಸ್ ಅಧ್ಯಕ್ಷ, ಪುದುಚೇರಿ ಜಿಪ್ಮೇರ್ ಡೀನ್ ಡಾ.ಗೋಪಾಲಕೃಷ್ಣ ಪಾಲ್ ವರ್ಚುವಲ್ ಭಾಷಣ ಮಾಡಿದರು.
ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್‌ನ ಕ್ಲಿನಿಕಲ್ ಅಂಡ್ ಮಾಲಿಕ್ಯುಲರ್ ಸೈಟೊಜಿನೆಸಿಸ್ ಮುಖ್ಯಸ್ಥ ಪ್ರೊ. ಜಯರಾಮ ಎಸ್. ಕಡಂದಲೆ, ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಬಯೊ ಎನರ್ಜಿ ರಿಸರ್ಚ್, ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ ನೈನಿತಾಲ್ ಉತ್ತರಖಾಂಡದ ನಿರ್ದೇಶಕಿ ಡಾ.ಮಧುಬಾಲ, ನಿಟ್ಟೆ ವಿ.ವಿ ರಿಸರ್ಚ್ ಅಡ್ವೈಸರ್ ಇಡ್ಯಾ ಕರುಣಾಸಾಗರ್, ನಿಟ್ಟೆ ಯುನಿವರ್ಸಿಟಿ ಸೆಂಟರ್ ಫಾರ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ನಿರ್ದೇಶಕಿ ಪ್ರೊ. ಇಂದ್ರಾಣಿ ಕರುಣಾಸಾಗರ್ ಅವರನ್ನು ಅಭಿನಂದಿಸಲಾಯಿತು.

ಸ್ಮರಣ ಸಂಚಿಕೆ ಹಾಗೂ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರೊ. ಪ್ರವೀಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಫ್ಯಾಕಲ್ಟಿ ಆಫ್ ಬಯೊಲಾಜಿಕಲ್ ಸೈನ್ಸಸ್ ನಿರ್ದೇಶಕ ಡಾ. ಅನಿರ್ಬಾನ್ ಚಕ್ರಬರ್ತಿ ವಂದಿಸಿದರು.

ದೇಶ -ವಿದೇಶಗಳ 700 ಶಿಬಿರಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.