ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಪಂಚಾಯಿತಿ ಅಧ್ಯಕ್ಷ ಜಯಾನಂದ್ ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
‘ಪಟ್ಟಣದ ವಿವಿಧೆಡೆ ಸಿ.ಸಿ ಚರಂಡಿ ಮುಚ್ಚಿಹೋಗಿದೆ. ಜಂಗಲ್ ಕಟ್ಟಿಂಗ್ ಆಗಬೇಕಿದೆ. ಇದಕ್ಕೆ 20 ವರ್ಷ ಹಳೆಯ ಟೆಂಡರ್ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. 11 ವಾರ್ಡ್, ಜನವಸತಿ ಪ್ರದೇಶದ ಮೇಲೆ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಟೆಂಡರ್ ಮೊತ್ತ ಕಡಿಮೆಯಾಗಿರುವ ಪರಿಣಾಮ ಟೆಂಡರ್ ಹಾಕಲು ಯಾರೂ ಮುಂದೆ ಬಂದಿಲ್ಲ’ ಎಂದು ಸದಸ್ಯ ಜಗದೀಶ್ ಆರೋಪಿಸಿದರು.
ಎಂಜಿನಿಯರ್ ಮಹಾವೀರ ಆರಿಗ ಮಾತನಾಡಿ, ‘ಅಷ್ಟು ದೊಡ್ಡ ಮೊತ್ತದ ಟೆಂಡರ್ ಕರೆಯಲು ಅವಕಾಶವಿಲ್ಲ. ಆದರೆ, ಅಗತ್ಯವಾಗಿ ಮರು ಟೆಂಡರ್ ಕರೆದು ಮ್ಯಾನುವಲ್ ಹಾಗೂ ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು’ ಎಂದು ತಿಳಿಸಿದರು.
‘ಮಹಾ ಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ ಕಳೆದ ಸಭೆಯಲ್ಲಿ ಚರ್ಚೆಯಾಗಿತ್ತು. ಈ ಸಭೆಯಲ್ಲಿ ತಾತ್ಕಾಲಿಕ ಅನುಮೋದನೆ ನೀಡಿ, ಪ್ರಕಟಣೆ ನೀಡಿ ಸರ್ಕಾರಕ್ಕೆ ಸಲ್ಲಿಸಬೇಕಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ. ಹೇಳಿದರು.
ಸದಸ್ಯ ಜಗದೀಶ್ ಮಾತನಾಡಿ, ‘ಪಟ್ಟಣ ಪಂಚಾಯಿತಿ ಮಹಾ ಯೋಜನೆಗೆ ಅನುಮೋದನೆ ಮಾಡುವ ಮುನ್ನವೇ ಪಟ್ಟಣದ ಒಳಗಿನ ವಸತಿ ಪ್ರದೇಶದ ರಸ್ತೆ 6 ಮೀಟರ್, ಸಂಪರ್ಕ ರಸ್ತೆ 9 ಮೀಟರ್ ಎಂದು ಹೇಳಿ ಈಗ 9 ಮೀಟರ್ ರಸ್ತೆ ಬಿಡಬೇಕೆಂದು ಹೇಳುತ್ತಿದ್ದೀರಿ. ಇದರಿಂದ ಪಟ್ಟಣದಲ್ಲಿ ಅರ್ಧದಷ್ಟು ಮನೆಗಳಿಗೆ ಹಾನಿಯಾಗುತ್ತದೆ. ಇದನ್ನು 6 ಮೀಟರ್‌ಗೆ ಮೀಸಲಿಡಬೇಕು. ಸ್ಪಂದಿಸದೆ ಇದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದರು.
ಮೂಡಾ ಎಡಿಎ ಪ್ರವೀಣ್ ಮಾತನಾಡಿ, ‘ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶವಿದೆ. 9 ಮೀಟರ್ ರಸ್ತೆ ಮೀಸಲಿಡುವಂತೆ ಸರ್ಕಾರವೇ ಸೂಚಿಸಿದೆ ಎಂದರು’ ಈ ಕುರಿತು ಚರ್ಚೆ ನಡೆಯಿತು.
ವಿದ್ಯುತ್ ಸಮಸ್ಯೆ, ಆರೋಗ್ಯ ಕುರಿತ ಚರ್ಚೆ ನಡೆಯಿತು.
ಆರೋಗ್ಯ ಇಲಾಖೆ ನಿರೀಕ್ಷಣಾಧಿಕಾರಿ ರಕ್ಷಿತ್, ಮುಖ್ಯಾಧಿಕಾರಿ ರಾಜೇಶ್ ಕೆ., ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಮೂಡ ಎಡಿಎ ಪ್ರವೀಣ್, ಎಂಜಿನಿಯರ್ ಮೋಕ್ಷಾ, ರಜನಿ ಕುಡ್ವ, ಮೆಸ್ಕಾಂ ಎಇ ಬೂಬ ಶೆಟ್ಟಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.