ADVERTISEMENT

ಬಂಟ್ವಾಳ: ಹಳೆ ಸೇತುವೆ ಸಂಚಾರ ಸ್ಥಗಿತಕ್ಕೆ ಸದಸ್ಯರ ಆಕ್ರೋಶ

ಬಂಟ್ವಾಳ ಪುರಸಭೆ: ಎಸ್‌ಡಿಪಿಐ ಸದಸ್ಯ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:37 IST
Last Updated 12 ಜೂನ್ 2025, 15:37 IST
ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯಾಧಿಕಾರಿ ನಜೀರ್ ಅಹ್ಮದ್, ಸದಸ್ಯರು ಪಾಲ್ಗೊಂಡಿದ್ದರು
ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯಾಧಿಕಾರಿ ನಜೀರ್ ಅಹ್ಮದ್, ಸದಸ್ಯರು ಪಾಲ್ಗೊಂಡಿದ್ದರು   

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆ ಮತ್ತು ಬಿ.ಸಿ.ರೋಡು ಸಂಪರ್ಕಸುವ ಹಳೆ ಸೇತುವೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಪೂರ್ಣ ನಿರ್ಬಂಧ ಹೇರಿ ಆದೇಶ ಹೊರಡಿಸಿರುವ ತಹಶೀಲ್ದಾರ್ ಅರ್ಚನಾ ಭಟ್ ಅವರ ಕ್ರಮಕ್ಕೆ ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು.

ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ರಸ್ತೆ ನಿರ್ಬಂಧ ಖಂಡಿಸಿ ಎಸ್‌ಡಿಪಿಐ ಸದಸ್ಯ ಪಿ.ಜೆ.ಇದ್ರಿಸ್ ಸಭಾ ತ್ಯಾಗ ಮಾಡಿದರು. ಕಾಂಗ್ರೆಸ್ ಸದಸ್ಯ ಸಿದ್ದಿಕ್ ಗುಡ್ಡೆಯಂಗಡಿ ಮತ್ತು ಬಿಜೆಪಿಯ ಎ.ಗೋವಿಂದ ಪ್ರಭು ಮಾತನಾಡಿ, ತಹಶೀಲ್ದಾರ್ ಆದೇಶಕ್ಕೆ ಪುರಸಭೆ ತಲೆಬಾಗಬಾರದು. ಅಲ್ಲಿನ ನಾಗರಿಕರು ಮತ್ತು ವರ್ತಕರು ಸೇರಿದಂತೆ ಪ್ರತಿದಿನ ಸಂಚರಿಸುತ್ತಿರುವ ವಿದ್ಯಾರ್ಥಿಗಳು, ಸ್ಥಳೀಯ ದೇವಸ್ಥಾನ ಮತ್ತು ಮಸೀದಿಗಳಿಗೆ ತೆರಳುವ ಭಕ್ತರು ತೊಂದರೆಗೀಡಾಗಿದ್ದಾರೆ ಎಂದರು.

ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ, ರಿಕ್ಷಾ ಮತ್ತು ಕಾರುಗಳ ಓಡಾಟಕ್ಕೆ ಅವಕಾಶ ನೀಡಬೇಕು. ಈ ಬಗ್ಗೆ ನಿರ್ಣಯ ಕೈಗೊಂಡು ಕೂಡಲೇ ಜಿಲ್ಲಾಧಿಕಾರಿ ಅವರ ಮನವೊಲಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಈ ನಡುವೆ ಕಳೆದ ಎರಡು ವರ್ಷಗಳಿಂದ ಪುರಸಭೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಹೆಸರಿನಲ್ಲಿ ಖರೀದಿಸಲಾದ ಟಿಪ್ಪರ್, ಜೆಸಿಬಿ ತುಕ್ಕು ಹಿಡಿಯುತ್ತಿದ್ದು, ವಾರಕ್ಕೊಮ್ಮೆ ಕೂಡಾ ಚಾಲನೆ ಮಾಡುತ್ತಿಲ್ಲ. ಕಳೆದ ಹಲವಾರು ವರ್ಷಗಳಿಂದ ಸಮಗ್ರ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಕಸ ಎಸೆಯುವವರನ್ನು ಪತ್ತೆ ಹಚ್ಚಲು ಖರೀದಿಸಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ ಮತ್ತು ದಾರಿದೀಪ ಕಳ್ಳರ ಪಾಲಾಗಿದೆ ಎಂದು ಸದಸ್ಯ ಹರಿಪ್ರಸಾದ್ ಆರೋಪಿಸಿದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ ನೀರಿನ ತೆರಿಗೆ, ಆಸ್ತಿ ತೆರಿಗೆ ಸಂಗ್ರಹ ₹ 65 ಲಕ್ಷದಿಂದ ₹ 1.80 ಕೋಟಿಗೆ ಏರಿಕೆಯಾಗಿದೆ ಎಂದು ಮುಖ್ಯಾಧಿಕಾರಿ ನಜೀರ್ ಅಹ್ಮದ್ ಸಭೆಗೆ ತಿಳಿಸಿದರು.

ಉಪಾಧ್ಯಕ್ಷ ಮುನೀಶ್ ಆಲಿ, ಸದಸ್ಯರಾದ ಪಿ.ರಾಮಕೃಷ್ಣ ಆಳ್ವ, ಜನಾರ್ದನ್ ಚೆಂಡ್ತಿಮಾರ್, ಮಹಮ್ಮದ್ ಶರೀಫ್, ಲೋಕೇಶ್ ಶೆಟ್ಟಿ, ಮಹಮ್ಮದ್ ನಂದರಬೆಟ್ಟು, ಜಗದೀಶ್ ಕುಂದರ್, ವಿದ್ಯಾವತಿ ಪ್ರಮೋದ್, ಜೆಸಿಂತ ಡಿಸೋಜ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಆರೋಗ್ಯಾಧಿಕಾರಿ ರತ್ನ ಪ್ರಸಾದ್, ಸಮುದಾಯ ಅಭಿವೃದ್ಧಿ ಅಧಿಕಾರಿ ಉಮಾವತಿ, ಅಬ್ದುಲ್ ರಝಾಕ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.