ADVERTISEMENT

ಸಾಂಬಾರಿಗೆ ಬಿದ್ದಿದ್ದ ಬಿಸಿಯೂಟ ಸಿಬ್ಬಂದಿ ಸಾವು

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:37 IST
Last Updated 15 ಜೂನ್ 2022, 5:37 IST
ಪ್ರಮೀಳಾ ಡಿಸೋಜ
ಪ್ರಮೀಳಾ ಡಿಸೋಜ   

ಪುತ್ತೂರು (ದಕ್ಷಿಣ ಕನ್ನಡ): ನಗರದ ಸೇಂಟ್ ವಿಕ್ಟರ್‌ ಶಾಲೆಯಲ್ಲಿ ಬಿಸಿಯೂಟ ತಯಾರಿ ವೇಳೆ ಸಾಂಬಾರು ಪಾತ್ರೆ ಮೇಲೆ ಕಾಲು ಜಾರಿ ಬಿದ್ದಿದ್ದ ಸಿಬ್ಬಂದಿ, ಕುರಿಯ ಗ್ರಾಮದ ಪ್ರಮೀಳಾ ಡಿಸೋಜ (37) ಮಂಗಳವಾರ ಮೃತಪಟ್ಟಿದ್ದಾರೆ.

ತಯಾರಿಸಿ ಇಟ್ಟಿದ್ದ ಸಾಂಬಾರಿನ ಪಾತ್ರೆಯ ಮೇಲೆ ಅವರು ಮೇ 30ರಂದು ಕಾಲುಜಾರಿ ಬಿದ್ದಿದ್ದರು. ಬಿಸಿ ಸಾಂಬಾರು ಮೈಮೇಲೆ ಬಿದ್ದಿದ್ದರಿಂದ ಸುಟ್ಟ ಗಾಯಗಳಾಗಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತರ ಸಹೋದರ ಜಾರ್ಜ್‌ ಪ್ರಸನ್ನ ಡಿಸೋಜ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

₹49.74 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು: ಕಳ್ಳಸಾಗಣೆಯಾದ ಅಂದಾಜು ₹49.74 ಲಕ್ಷ ಬೆಲೆಯ 964 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ವಶಪಡಿಸಿಕೊಂಡಿದ್ದಾರೆ‌.

ದುಬೈನಿಂದ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರೊಬ್ಬರು ಆಯತಾಕಾರದ ನಾಲ್ಕು ಸಾಮಗ್ರಿಗಳ ಒಳಗೆ ಚಿನ್ನದ ಹುಡಿಯನ್ನು ಹುದುಗಿಸಿ ಗುದನಾಳದಲ್ಲಿ ಇಟ್ಟುಕೊಂಡಿದ್ದರು‌. ಅದನ್ನು ಹೊರತೆಗೆದು ಶೋಧಿಸಿದಾಗ ಚಿನ್ನ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಹನ ಡಿಕ್ಕಿ: ಸಾವು

ಪುತ್ತೂರು: ನಗರ ಹೊರವಲಯದ ನೆಹರು ನಗರದಲ್ಲಿ ಮಂಗಳವಾರ ರಾತ್ರಿ ಬೈಕ್‌ ಮತ್ತು ಆ್ಯಕ್ಟಿವ ನಡುವೆ ಡಿಕ್ಕಿ ಸಂಭವಿಸಿ ಆರ್ಯಾಪು ಗ್ರಾಮದ ದೇವಸ್ಯದ ರವೀಂದ್ರ (60) ಮೃತಪಟ್ಟಿದ್ದಾರೆ.

ರವೀಂದ್ರ‌, ನಗರದ ಎಂ. ಟಿ. ರಸ್ತೆಯ ಮಹಮ್ಮಾಯಿ ದೇವಸ್ಥಾನದ ಬಳಿ ಕೀ ಮತ್ತು ಸ್ಟವ್ ರಿಪೇರಿ ಅಂಗಡಿ ನಡೆಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಇದ್ದಾರೆ.

ಟಿಪ್ಪರ್–ಬೈಕ್ ಡಿಕ್ಕಿ: ಇಬ್ಬರ ಸಾವು

ಬಂಟ್ವಾಳ: ಇಲ್ಲಿನ ಬಂಟ್ವಾಳ– ಮೂಡುಬಿದ್ರೆ ಮುಖ್ಯರಸ್ತೆಯ ಸೋರ್ಣಾಡು ಬಳಿ ಮಂಗಳವಾರ ಟಿಪ್ಪರ್– ಬೈಖ್‌ ಡಿಕ್ಕಿಯಾಗಿ ಬೈಕ್ ಸವಾರ ಅಮ್ಟಾಡಿ ಗ್ರಾಮದ ಕಮಲ್ ಕಟ್ಟೆ ನಿವಾಸಿ ನಿತಿನ್ (30) ಮತ್ತು ಬಂಟ್ವಾಳದ ಶಶಿರಾಜ್ (26) ಮೃತಪಟ್ಟಿದ್ದಾರೆ.

ನಿತಿನ್ ಎಂಬವರು ಲೊರೆಟ್ಟೊ ಎಂಬಲ್ಲಿ ಗ್ಯಾರೇಜ್ ಮೆಕ್ಯಾನಿಕ್ ಆಗಿದ್ದು, ಶಶಿರಾಜ್ ಪಿಕಪ್ ಚಾಲಕರಾಗಿದ್ದರು.

ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ

ಕಾರ್ಕಳ: 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಬೆಳ್ತಂಗಡಿಯ ಶಕ್ತಿವೇಲು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

2006ರ ಫೆಬ್ರುವರಿ 7ರಂದು ಕುಕ್ಕಂದೂರು ಗ್ರಾಮದ ಹುಡ್ಕೊ ಕಾಲೊನಿಯ ಪ್ರಶಾಂತ ನಾಯ್ಕ್ ಅವರಿಗೆ ಜೀವ ಬೆದರಿಕೆ ಹಾಕಿದ್ದು, ಪ್ರಕರಣ ದಾಖಲಾಗಿತ್ತು.

ಆರೋಪಿ ಶಕ್ತಿವೇಲು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದನು.ಆರೋಪಿ ಬೆಳ್ತಂಗಡಿಗೆ ಬಂದ ಮಾಹಿತಿ ಪಡೆದ ಪೊಲೀಸರು ಬಂಧಿಸಿ, ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಶಕ್ತಿವೇಲು ವಿರುದ್ಧ ಪಾಂಡೇಶ್ವರ, ಕದ್ರಿ, ಕಂಕನಾಡಿ, ಬೆಳ್ತಂಗಡಿ, ಉಡುಪಿ ಮತ್ತಿತರ ಠಾಣೆಗಳಲ್ಲಿ ಪ್ರಕರಣಗಳಿವೆ.

ಪಿಎಸ್‌ಐ ದಾಮೋದರ್, ಎಎಸ್‌ಐ ರಾಜೇಶ್ ಪಿ, ಸಿಬ್ಬಂದಿ ಪ್ರಸನ್ನ, ಸಿದ್ದರಾಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.