ADVERTISEMENT

ಸುಬ್ರಹ್ಮಣ್ಯ: ಭೂ ಕುಸಿತ ಸ್ಥಳ ಪರಿಶೀಲನೆ; ಸ್ಥಳೀಯರಿಂದ ಮಾಹಿತಿ ಸಂಗ್ರಹ

ಕಲ್ಮಕಾರು ಗ್ರಾಮದ ಗುಳಿಕ್ಕಾನಕ್ಕೆ ಗಣಿ ಇಲಾಖೆ ಅಧಿಕಾರಿಗಳು, ಭೂ ವಿಜ್ಞಾನಿ ತಜ್ಞರ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 12:36 IST
Last Updated 4 ಜುಲೈ 2022, 12:36 IST
ಗುಳಿಕ್ಕಾನಕ್ಕೆ ತಜ್ಞರ ತಂಡ ಭೇಟಿ ನೀಡಿತು 
ಗುಳಿಕ್ಕಾನಕ್ಕೆ ತಜ್ಞರ ತಂಡ ಭೇಟಿ ನೀಡಿತು    

ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಮಕಾರು ಗ್ರಾಮದ ಗುಳಿಕ್ಕಾನಕ್ಕೆ ಭೂ ವಿಜ್ಞಾನಿಗಳು, ಗಣಿ ಇಲಾಖೆ ಅಧಿಕಾರಿಗಳ ತಂಡವು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆಯಿತು.

ಮಡಿಕೇರಿಗೆ ಹೊಂದಿಕೊಂಡಿರುವ ಇಲ್ಲಿ ಕೆಲ ವರ್ಷಗಳ ಹಿಂದೆ ಭೂ ಕುಸಿತದಿಂದ ಸಮಸ್ಯೆ ಉಂಟಾಗಿತ್ತು. ಕೆಲ ದಿನಗಳ ಹಿಂದೆ ಭೂ ಕಂಪನ ಸಂಭವಿಸಿತ್ತು. ಜಿಲ್ಲಾಧಿಕಾರಿ ಸೂಚನೆಯಂತೆ ಇಲಾಖಾಧಿಕಾರಿಗಳ ತಂಡ ಭೇಟಿ ನೀಡಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಯೂ ಇದ್ದರು.

ಗುಳಿಕ್ಕಾನದಲ್ಲಿನ ಹತ್ತು ಮನೆಗಳಿಗೂ ಭೇಟಿ ನೀಡಿದ ತಂಡವು, ಅಲ್ಲಿನ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಈ ಹಿಂದೆ ಭೂ ಕುಸಿತ ಸಂಭವಿಸಿದ ಗುಡ್ಡದ ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಜತೆಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದರು.

ADVERTISEMENT

ಅಧಿಕಾರಿಗಳ ತಂಡ ವರದಿ ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಿದ್ದು, ಅವರು ಮುಂದಿನ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ.

‘ಆಗಸ್ಟ್‌ನಲ್ಲಿ ಹೆಚ್ಚಿನ ಮಳೆಯಾಗುವುದರಿಂದ ನಮಗೆ ಆತಂಕ ಕಾಡುತ್ತದೆ. ಅದಕ್ಕೆ ಮೊದಲು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ’ ಎಂದು ಒತ್ತಾಯಿಸಿದರು.

ಕೆಲ ವರ್ಷಗಳ ಹಿಂದೆ ಕೊಡಗಿನಲ್ಲಿ ಭಾರಿ ಭೂ ಕುಸಿತ ಸಂಭವಿಸಿದ ವೇಳೆ ಕಲ್ಮಕಾರಿನ ಗುಳಿಕ್ಕಾನ ಪ್ರದೇಶದಲ್ಲೂ ಭೂ ಕುಸಿತ ಸಂಭವಿತ್ತು. ಗುಡ್ಡದಲ್ಲಿ ಬಿರುಕು ಬಿಟ್ಟಿತ್ತು. ಈ ವೇಳೆ ಪರಿಶೀಲನೆ ನಡೆಸಿದ ತಜ್ಞರು ಬದಲಿ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದ್ದರು.

ಆದರೆ, ಕಂದಾಯ ಮತ್ತು ಅರಣ್ಯ ಇಲಾಖೆ ನಡುವಿನ ಗೊಂದಲದಿಂದ ಸ್ಥಳೀಯರಿಗೆ ನಿವೇಶನ ದೊರೆತಿಲ್ಲ.

ಪಂಜ ಕಂದಾಯ ನಿರೀಕ್ಷಕ ಚಂದ್ರಕಾಂತ್, ಗ್ರಾಮ ಲೆಕ್ಕಾಧಿಕಾರಿ ಮಧುಕುಮಾರ್, ಪಿಡಿಒ ರವಿಚಂದ್ರ, ಗ್ರಾಮ ಸಹಾಯಕ ಯತೀಶ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.