ADVERTISEMENT

ಅಕ್ರಮ ಗಣಿಗಾರಿಕೆಯಲ್ಲಿ ಶಾಸಕರ ಕೈವಾಡ

ಮಾಜಿ ಸಚಿವ ಬಿ.ರಮಾನಾಥ ರೈ ಆರೋಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 6:42 IST
Last Updated 18 ಅಕ್ಟೋಬರ್ 2020, 6:42 IST
ಬಿ. ರಮಾನಾಥ ರೈ
ಬಿ. ರಮಾನಾಥ ರೈ   

ಮಂಗಳೂರು: ‘ಜಿಲ್ಲೆಯಲ್ಲಿ ಕೆಲವು ತಿಂಗಳಿನಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರ ಕೈವಾಡವಿದೆ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಣಾಜೆ ಸಮೀಪದ ಮುಡಿಪು, ಬಾಳೆಪುಣಿ, ಇನೋಳಿ ಪ್ರದೇಶದಲ್ಲಿ ವ್ಯಾಪಕವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹50 ಕೋಟಿ ನಷ್ಟ ಉಂಟಾಗಿದೆ. ಈ ದಂಧೆಯಲ್ಲಿ ಸ್ಥಳೀಯರಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಕೇರಳದವರೂ ಶಾಮೀಲಾಗಿದ್ದಾರೆ’ ಎಂದು ದೂರಿದರು.

‘ಆಡಳಿತ ಪಕ್ಷದ ಶಾಸಕರೊಬ್ಬರ ಸಂಬಂಧಿಕರು ಬಡಗ ಎಡಪದವು ಗ್ರಾಮದ ಗಂಜಿಮಠದಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆದು ಮುಡಿಪುವಿನಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇದು ಆಡಳಿತ ಪಕ್ಷದ ಶಾಸಕರಿಗೆ, ಜಿಲ್ಲಾಡಳಿತಕ್ಕೆ, ಸರ್ಕಾರಕ್ಕೂ ತಿಳಿದಿದೆ’ ಎಂದು ಆಕ್ಷೇಪಿಸಿದರು.

ADVERTISEMENT

ಮುಡಿಪು ಪರಿಸರದಲ್ಲಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ದಾಳಿ ಮಾಡಿದ ಮಂಗಳೂರು ಉಪ ವಿಭಾಗಾಧಿಕಾರಿ ಕ್ರಮ ಜರುಗಿಸಿದ್ದರು. ಆದರೆ ಅವರನ್ನೇ ವರ್ಗಾಯಿಸಲಾಗಿದೆ. ಬಳ್ಳಾರಿ ಮಾದರಿಯ ಈ ಗಣಿಗಾರಿಕೆಯ ವಿರುದ್ಧ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಬೇಕು. ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ, ಪಾಲಿಕೆ ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನೀರಜ್‌ಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.