ADVERTISEMENT

ದೇವಳ ವ್ಯವಸ್ಥಾಪನಾ ಸಮಿತಿ ರಚನೆಯಲ್ಲಿ ಗೊಂದಲವಿಲ್ಲ: ಸಚಿವ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 10:57 IST
Last Updated 15 ಡಿಸೆಂಬರ್ 2019, 10:57 IST
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು   

ಪುತ್ತೂರು: ‘ರಾಜ್ಯದ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಳಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಅವಧಿ ಮುಗಿದಿರುವ ಶೇಕಡ 80ರಿಂದ 90ರಷ್ಟು ದೇವಳಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸುವ ನಿಟ್ಟಿನಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಮೂಲಕ ಅರ್ಜಿ ಆಹ್ವಾನಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಈಶ್ವರಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಹಲವು ದೇವಳಗಳಲ್ಲಿ ಅವ್ಯವಹಾರಗಳು, ರಾಜಕೀಯ ಗೊಂದಲಗಳು, ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿರುವ ಕುರಿತು ದೂರುಗಳು ಬಂದಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವ್ಯವಸ್ಥಾಪನಾ ಸಮಿತಿಗಳನ್ನು ರದ್ದು ಪಡಿಸುವಂತೆ ಹೇಳಿದ್ದಾರೆ. ಈ ಬಗ್ಗೆ ಪರಿಶೀಲಿಸುತ್ತೇವೆ. ಮುಖ್ಯಮಂತ್ರಿಯವರ ಟಿಪ್ಪಣಿಯನ್ನು ಪಾಲಿಸುತ್ತೇವೆ’ ಎಂದು ಅವರು ತಿಳಿಸಿದರು.

ADVERTISEMENT

ಏಪ್ರಿಲ್‌ 24ರಂದು ಸಾಮೂಹಿಕ ವಿವಾಹ: ‘ರಾಜ್ಯ ಮುಜರಾಯಿ ಇಲಾಖೆಯ ವತಿಯಿಂದ ಏಪ್ರಿಲ್ 24ರಂದು ರಾಜ್ಯದ 100 ದೇವಳಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ವಧುವರರಿಗೆ ₹55 ಸಾವಿರ ಹಣ, ವಧುವಿಗೆ ₹40 ಸಾವಿರ ಮೌಲ್ಯದ 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಹಾಗೂ ಧಾರೆ ಸೀರೆಗೆ ₹10 ಸಾವಿರ, ವರನಿಗೆ ಪಂಚೆಗೆ ₹5 ಸಾವಿರ ನೀಡಲಾಗುವುದು. ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು. ಶಿಶು ಕಲ್ಯಾಣ ಇಲಾಖೆಯ ವತಿಯಿಂದಲೂ ₹10 ಸಾವಿರ ನಗದು ಹಣ ಕೊಡಿಸುವ ಕೆಲಸ ಮಾಡಲಾಗುವುದು. ಮಾಂಗಲ್ಯವನ್ನು ಅವ್ಯವಹಾರ ರಹಿತವಾಗಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ನೀಡುವ ವ್ಯವಸ್ಥೆ ಮಾಡಬೇಕೇ ಅಥವಾ ಜ್ಯುವೆಲ್ಲರಿಗೆ ಮಳಿಗೆ ಮೂಲಕ ಖರೀದಿಸಿ ಕೊಡಬೇಕೇ ಎಂಬ ಕುರಿತು ಚಿಂತನೆ ನಡೆದಿದೆ’ ಎಂದ ಸಚಿವರು ತಿಳಿಸಿದರು.

ಕಟೀಲು, ಸುಬ್ರಹ್ಮಣ್ಯ, ಪುತ್ತೂರಿನ ಮಹಾಲಿಂಗೇಶ್ವರ ದೇವಳವೂ ಸೇರಿದಂತೆ ಜಿಲ್ಲೆಯ 24 ಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಕೆಲವೊಂದು ಸಮಸ್ಯೆಗಳಿಂದಾಗಿ ಏಪ್ರಿಲ್‌ 24ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಸಾಧ್ಯವಾಗದ ದೇವಳಗಳಲ್ಲಿ ಮೇ 24ರಂದು ಆಯೋಜಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.