ADVERTISEMENT

ಮೀನುಗಾರಿಕೆ: ಸಮಗ್ರ ನೀತಿ ಜಾರಿಗೆ ಚಿಂತನೆ

ಅಗತ್ಯವಿದ್ದಲ್ಲಿ ಸದ್ಯಕ್ಕಿರುವ ಕಾಯ್ದೆಗೆ ತಿದ್ದುಪಡಿ: ಸಚಿವ ಕೋಟ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 13:57 IST
Last Updated 21 ನವೆಂಬರ್ 2019, 13:57 IST
ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ   

ಮಂಗಳೂರು: ಕಡಲು ಹಾಗೂ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಮಗ್ರ ಮೀನುಗಾರಿಕಾ ನೀತಿಯನ್ನು ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಮುಜರಾಯಿ, ಬಂದರು ಹಾಗೂ ಮೀನುಗಾರಿಕೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಆವರಣದ ತಮ್ಮ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಗತ್ಯವಿದ್ದಲ್ಲಿ ಈಗಿರುವ ಕರ್ನಾಟಕ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಮತ್ತು ಒಳನಾಡು ಮೀನುಗಾರಿಕಾ ನೀತಿಗೆ ತಿದ್ದುಪಡಿ ತರಲು ಅನುಕೂಲ ಆಗುವಂತೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಪೂರ್ವಭಾವಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಮೀನು ಮರಿಗಳ ಉತ್ಪಾದನೆ, ಮೀನು ಸಾಗಣೆ, ಕಡಲ ಮೀನುಗಾರಿಕೆಗೆ ಸಂಬಂಧಿಸಿ ಮೂಲ ಸೌಕರ್ಯಗಳನ್ನು ಒದಗಿಸುವುದು, ಯಾಂತ್ರಿಕ ದೋಣಿಗಳಿಗೆ ಮೂಲಸೌಕರ್ಯ, ಮೀನುಗಾರರ ಬದುಕಿನ ಭದ್ರತೆ, ಮೀನುಗಾರರಿಗೆ ಇತರ ರಾಜ್ಯಗಳ ಕಿರುಕುಳ ಸೇರಿದಂತೆ ಸಮಗ್ರ ವಿಚಾರಗಳು ಈ ಸಮಗ್ರ ನೀತಿಯ ವ್ಯಾಪ್ತಿಗೊಳಪಡಲಿದೆ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ 50 ಕೋಟಿ ಮೀನು ಮರಿಗಳ ಬೇಡಿಕೆ ಇದೆ. ರಾಜ್ಯದ ಸರ್ಕಾರಿ ಮೀನು ಮರಿ ಉತ್ಪಾದನಾ ಘಟಕ, ಖಾಸಗಿ ಖರೀದಿ ಮೂಲಕವೂ ಈ ಬೇಡಿಕೆಯಲ್ಲಿ ಶೇ 55ರಷ್ಟನ್ನು ಮಾತ್ರ ಪೂರೈಸಲು ಸಾಧ್ಯವಾಗಿದೆ. ಹಾಗಾಗಿ ರಾಜ್ಯದಲ್ಲಿ ಮೀನು ಮರಿ ಕೇಂದ್ರಗಳ ಉನ್ನತೀಕರಣಕ್ಕಾಗಿ ₹4.73 ಕೋಟಿ ಯೋಜನೆಯನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಹೇಳಿದರು.

ನಾರಾಯಣಪುರ ಮೀನು ಉತ್ಪಾದನಾ ಕೇಂದ್ರದ ಉನ್ನತೀಕರಣಕ್ಕೆ ₹4 ಕೋಟಿ ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಮಂಗಳೂರಿನ 3ನೇ ಹಂತದ ಜೆಟ್ಟಿ ನಿರ್ಮಾಣಕ್ಕೆ ₹22 ಕೋಟಿ ಯೋಜನೆ ವರದಿ ಸಿದ್ಧಗೊಂಡಿದೆ. ಸಚಿವ ಸಂಪುಟದಲ್ಲಿ ಪ್ರಸ್ತಾವ ಇರಿಸಿ, ಅನುದಾನ ಪಡೆಯಲಾಗುವುದು ಎಂದು ಹೇಳಿದರು.

ತೇಲುವ ಜೆಟ್ಟಿ: ಮಂಗಳೂರು ಹಾಗೂ ಮಲ್ಪೆ ಸಮುದ್ರ ತೀರದಲ್ಲಿ ತೇಲುವ ಜೆಟ್ಟಿ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಮದ್ರಾಸ್ ಐಐಟಿಯಿಂದ ತಾಂತ್ರಿಕ ವರದಿಯ ಆಧಾರದಲ್ಲಿ ₹6.5 ಕೋಟಿ ವೆಚ್ಚದಲ್ಲಿ ಈ ಜೆಟ್ಟಿ ನಿರ್ಮಾಣ ಆಗಲಿದೆ. ಇದೊಂದು ಹೊಸ ಕಲ್ಪನೆಯಾಗಿದ್ದು, ಗೋವಾದಲ್ಲಿ ಈಗಾಗಲೇ ಇಂತಹ ಜೆಟ್ಟಿಯನ್ನು ನಿರ್ಮಿಸಲಾಗಿದ್ದು, ಅಧಿಕಾರಿಗಳು ಅಧ್ಯಯನ ನಡೆಸಿ, ಸಾಧಕ–ಬಾಧಕಗಳ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತ್ಯಾಜ್ಯ ನಿರ್ವಹಣಾ ಘಟಕ: ಮಲ್ಪೆ ಸಮುದ್ರ ಕಿನಾರೆಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ಮೀನುಗಾರಿಕಾ ಇಲಾಖೆ ಕ್ರಮ ಕೈಗೊಂಡಿದೆ. ಯೋಜನೆಗೆ ಸಂಬಂಧಿಸಿದಂತೆ ಕೆಯುಡಬ್ಲುಡಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತಾಂತ್ರಿಕ ಮಾಹಿತಿ ಪಡೆದು, ಕಾಮಗಾರಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಮಲ್ಪೆ ಬಂದರಿನಲ್ಲಿರುವ ಸ್ಪೀಪ್‌ವೇ ನಿರ್ವಹಣೆಯನ್ನು ಟೆಬ್ಮಾ ಶಿಪ್ ಯಾರ್ಡ್‌ನಿಂದ ಮಲ್ಪೆ ಮೀನುಗಾರರ ಸಂಘಕ್ಕೆ ನೀಡುವ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ತೀಮಾನಿಸಲಾಗಿದೆ. ಮಲ್ಪೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ಜೆಟ್ಟಿ ವಿಸ್ತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮರಳು: ಕಠಿಣ ಕ್ರಮಕ್ಕೆ ಸೂಚನೆ: ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಮರಳು ಪೂರೈಕೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಮರಳಿನ ಕೊರತೆ ಉಂಟಾಗಿರುವ ಬಗ್ಗೆ ದೂರುಗಳು ಬಂದಿದೆ. ಹಾಗಾಗಿ ಅಕ್ರಮ ಮರಳು ಸಾಗಣೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್‌ ಆಯುಕ್ತರ ಜತೆ ಸಭೆ ನಡೆಸಲಾಗಿದೆ ಎಂದ ಅವರು, ಸರ್ಕಾರಕ್ಕೆ ಯಾವುದೇ ಹಟವಿಲ್ಲ. ಅಕ್ರಮ ಸಾಗಣೆಯನ್ನು ಸಹಿಸಲಾಗದು. ಗಣಿ ಹಾಗೂ ಪೊಲೀಸ್ ಇಲಾಖೆ ತಂಡ ರಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದ 31 ಕಡೆ ಮತ್ಸದರ್ಶಿನಿ: ಬೆಂಗಳೂರು, ಮಂಗಳೂರು, ಉಡುಪಿ, ಬಳ್ಳಾರಿ, ಶಿವಮೊಗ್ಗ, ಬೆಳ್ತಂಗಡಿ, ಪುತ್ತೂರು, ಸುಳ್ಯ, ತುಮಕೂರು, ರಾಯಚೂರು, ಕಲಬುರ್ಗಿ, ಮೈಸೂರು ಸೇರಿದಂತೆ ರಾಜ್ಯದ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಹಂತದಲ್ಲಿ 31 ಮತ್ಸದರ್ಶಿನಿ ಹೋಟೆಲ್‌ ತೆರೆಯಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇದಕ್ಕಾಗಿ ಈಗಾಗಲೇ ₹11 ಕೋಟಿ ಕಾಯ್ದಿರಿಸಲಾಗಿದೆ. ತಾಜಾ ಮೀನು ಹಾಗೂ ಆಲಂಕಾರಿಕ ಮೀನು ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುವುದು. ಮೀನು ಪ್ರಿಯರಿಗೆ ತಾಜಾ ಮೀನಿನ ಊಟ ಈ ಹೋಟೆಲ್‌ಗಳಲ್ಲಿ ಲಭ್ಯವಾಗಲಿದೆ ಎಂದರು.

ಮೀನುಗಾರರ ಸಮಸ್ಯೆ ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಜತೆ ಕರಾವಳಿ ವಲಯದ ಭದ್ರತೆಗೆ ಸಂಬಂಧಿಸಿದಂತೆ ಮೂರು ಜಿಲ್ಲೆಗಳ ಸಭೆಯನ್ನು ಡಿಸೆಂಬರ್ 5ರಿಂದ 10ರೊಳಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.